ಬಂಟ್ವಾಳ|ಸಬ್ ಇನ್ಸ್ಪೆಕ್ಟರ್ ಆಗಿ ನೇಮಕಗೊಂಡ ಮಾಣಿಯ ಸುಶ್ಮಿತಾ ಶೆಟ್ಟಿ..!! ಗ್ರಾಮಸ್ಥರ ಭರಪೂರ ಅಭಿನಂದನೆ..!

  • 01 Feb 2025 05:48:29 PM

ಬಂಟ್ವಾಳ: ವಿದ್ಯೆ ಮನುಷ್ಯನಿಗಿರುವ ದೊಡ್ಡದಾದ ಆಸ್ತಿ. ಶಿಕ್ಷಣ ನಮಗೆ ಗೌರವ ನೀಡುವುದಲ್ಲದೆ ಎಂತಹ ಸಂದರ್ಭದಲ್ಲೂ ಕೈ ಹಿಡಿಯುತ್ತದೆ. ಮನಸ್ಸಿಟ್ಟು ಓದಿದ ವಿದ್ಯೆ, ನಿಷ್ಠೆಯಿಂದ ಹಾಕಿದ ಶ್ರಮಕ್ಕೆ ದೇವರು ಫಲ ನೀಡಿಯೇ ನೀಡುತ್ತಾರೆ ಎಂಬುದಕ್ಕೆ ಬಂಟ್ವಾಳ ತಾಲ್ಲೂಕಿನ ಈ ಹುಡುಗಿಯೇ ಜೀವಂತ ಸಾಕ್ಷಿ. ಸಬ್ ಇನ್ಸ್ಪೆಕ್ಟರ್ ನೇಮಕಾತಿಯ ಪರೀಕ್ಷೆ ಬರೆದ ಈ ಯುವತಿಗೆ ಅತ್ಯಂತ ಗೌರವಯುತ ಹುದ್ದೆ ಲಭಿಸಿದ್ದು ಎಸ್ಐ ಆಗಿ ನೇಮಕಗೊಂಡಿದ್ದಾರೆ.

 

ಎಸ್ಐ ಪರೀಕ್ಷೆ ಬರೆದು ಉತ್ತೀರ್ಣಳಾದ ಸುಶ್ಮಿತಾ ಶೆಟ್ಟಿ...!!

 

ಮಾಣಿ ಗ್ರಾಮದ ಬದಿಗುಡ್ಡೆ ನಿವಾಸಿ ಕೃಷಿಕರಾದ ರಾಧಾಕೃಷ್ಣ ಮತ್ತು ಶಾಂತ ಶೆಟ್ಟಿಯವರ ಮೂವರು ಮಕ್ಕಳಲ್ಲಿ ಸುಶ್ಮಿತಾ ಶೆಟ್ಟಿ ಕಿರಿಯವರು. ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುವ ಕನಸು ಹೊಂದಿದ್ದ ಇವರು ಎಸ್ಐ ನೇಮಕಾತಿಯ ಪರೀಕ್ಷೆ ಬರೆದಿದ್ದರು. ಇದೀಗ ಇವರ ಶ್ರಮಕ್ಕೆ ಪ್ರತಿಫಲ ಸಿಕ್ಕಿದ್ದು ಆ ಎಕ್ಸಾಂನಲ್ಲಿ ಉತ್ತೀರ್ಣಳಾಗಿ ಸಬ್ ಇನ್ಸ್ಪೆಕ್ಟರ್ ಆಗಿ ನೇಮಕಗೊಂಡಿದ್ದಾರೆ.

 

ಮೂರು ಪದವಿ ಪಡೆದಿದ್ರೂ ತನ್ನ ಗುರಿ ಬಿಡದ ಸಾಧಕಿ ಕೊನೆಗೂ ಸಾಧಿಸಿಯೇ ಬಿಟ್ರು...!!!

 

ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಮುಗಿಸಿದ ಇವರು ಉಳಿದ ವ್ಯಾಸಂಗವನ್ನು, ಬಿಕಾಂ ಪದವಿಯನ್ನು ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಪೂರ್ಣಗೊಳಿಸಿದ್ದಾರೆ. ಮಂಗಳೂರಿನ ರೋಷನಿ ನಿಲಯ ಕಾಲೇಜಿನಲ್ಲಿ ಮತ್ತೆ ಎಂಎಸ್ ಡಬ್ಲ್ಯೂ ಪದವಿಯನ್ನು ಪಡೆದು ಕೋಲಾರದ ಬಂಗಾರಪೇಟೆಯಲ್ಲಿ ಬಿ.ಎಡ್ ಶಿಕ್ಷಣವನ್ನು ಪಡೆಯುತ್ತಿರುವಾಗಲೇ ಎಸ್ಐ ನೇಮಕಾತಿ ಪರೀಕ್ಷೆಯನ್ನು ಬರೆದಿದ್ದರು. ಇದೀಗ ಇವರ ಸಾಧನೆ ಕಂಡು ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.