ಬಾಂಗ್ಲಾದೇಶದಿಂದ ಅಕ್ರಮವಾಗಿ ಭಾರತಕ್ಕೆ ನುಸುಳಿ ನಕಲಿ ಭಾರತೀಯ ಗುರುತು ಚೀಟಿಗಳೊಂದಿಗೆ ಕೇರಳದಲ್ಲಿ ನೆಲೆಸಿರುವ ಬಾಂಗ್ಲಾ ಪ್ರಜೆಗಳನ್ನು ಪತ್ತೆ ಮಾಡುವುದಕ್ಕಾಗಿ ರಾಜ್ಯ ಉಗ್ರ ನಿಗ್ರಹದಳ ಮತ್ತು ಪೊಲೀಸರು ಜ.30 ರಂದು ರಾತ್ರಿ ಹಲವೆಡೆ ದಾಳಿ ನಡೆಸಿದ್ದಾರೆ. ಅದರಲ್ಲಿ 27 ಮಂದಿಯನ್ನು ಬಂಧಿಸಿದ್ದಾರೆ.
ಕ್ಲೀನ್ ರೂರಲ್ ಜಂಟಿ ಕಾರ್ಯಾಚರಣೆಯ ವೇಳೆ, ಕೊಚ್ಚಿಯ ಮುನಂಬಂ ಲೇಬರ್ ಶಿಬಿರದಿಂದ 27 ಮಂದಿಯನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಕಾರ್ಯಾಚರಣೆಗಳು ಇನ್ನೂ ನಡೆಯುತಿದ್ದು ಬಂಧಿತರಿಂದ ನಕಲಿ ಗುರುತು ಚೀಟಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಶಿಬಿರದಲ್ಲಿ ಇವರು ಕಳೆದ ಕೆಲವು ತಿಂಗಳುಗಳಿಂದ ಕೂಲಿ ಕೆಲಸ ಮಾಡುತ್ತಿದ್ದರು.
ಈ ಶಿಬಿರದಿಂದ 50ಕ್ಕೂ ಹೆಚ್ಚು ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದ್ದು, ಅವರಲ್ಲಿ 23 ಮಂದಿ ಅನ್ಯ ರಾಜ್ಯದ ನಿವಾಸಿಗಳಾಗಿದ್ದಾರೆ ಎಂದು ವರದಿಯಾಗಿದೆ. ಬಂಧಿತರನ್ನು ತೀವ್ರ ವಿಚಾರಣೆಗೆ ಒಳಪಡಿಸಲಾಗಿದ್ದು, ಅವರಿಗೆ ನಕಲಿ ಗುರುತು ಚೀಟಿಗಳನ್ನು ಪೂರೈಸಿದವರು ಯಾರು? ಹೇಗೆ? ಉದ್ದೇಶವೇನು?? ಎಂಬುದರ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಮತ್ತು ಕೇಂದ್ರ ರಹಸ್ಯ ತನಿಖಾ ವಿಭಾಗ ಕೂಡ ಈ ಪ್ರಕರಣದ ಕುರಿತಾಗಿ ಗಂಭೀರವಾಗಿ ತನಿಖೆ ನಡೆಸುತ್ತಿದೆ.
ಇತ್ತೀಚೆಗೆ ಅಸ್ಸಾಂ ಪೊಲೀಸರು ಅಲ್-ಖೈದಾ ಭಯೋತ್ಪಾದಕ ಸಂಘಟನೆಯ ಸದಸ್ಯನನ್ನು ಹೊಸದುರ್ಗದ ಪಡನ್ನಕ್ಕಾಡ್‌ನಲ್ಲಿ ಸೆರೆಹಿಡಿದು ಬಂಧಿಸಿದ್ದರು. ಬಾಂಗ್ಲಾದಿಂದ ಅಕ್ರಮವಾಗಿ ನುಸುಳಿದ ಈತ ಭಾರತದ ಪ್ರಮುಖ ಮುಖಂಡರ ಮೇಲೆ ಹಲ್ಲೆ ನಡೆಸುವ ಹಾಗೂ ಗಲಭೆ ಸೃಷ್ಟಿಸುವ ಹುನ್ನಾರ ನಡೆಸುತ್ತಿದ್ದ ಎಂದು ತಿಳಿದು ಬಂದಿದೆ.