ಬೆಂಗಳೂರು: ಹಣ ಗಳಿಸುವ ಉದ್ದೇಶದಿಂದ ಅನೇಕರು ತಪ್ಪು ದಾರಿಗಳನ್ನು ಹಿಡಿಯೋದು ಗೊತ್ತೇ ಇದೆ. ಕೆಲವರು ಕಿಡ್ಯ್ಯಾಪ್, ಸುಲಿಗೆ, ದರೋಡೆ ಮಾಡಿ ಕಳ್ಳತನ ಮಾಡಿದ್ರೆ ಇನ್ನೂ ಕೆಲವರು ಕಳ್ಳತನದಲ್ಲೂ ಡಿಜಿಟಲೀಕರಣವಿರುತ್ತದೆ. ಸೈಬರ್ ಕ್ರಿಮಿಗಳು ಹಣವನ್ನು ಲಪಟಾಯಿಸುವ ಬಗ್ಗೆ ಕಿಂಚಿತ್ತೂ ಅನುಮಾನ ಬರದ ರೀತಿಯಲ್ಲಿ ನಿಭಾಯಿಸುತ್ತಾರೆ.
ಆದರೆ ಇಲ್ಲಿ ಈ ಗ್ಯಾಂಗೊಂದು ಸೋಷಿಯಲ್ ಮೀಡಿಯಾದಲ್ಲಿ ಹಣ ಗಳಿಸಲು ಖತರ್ನಾಕ್ ಐಡಿಯಾ ಒಂದನ್ನು ಯೋಜಿಸಿ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ.
ಫೇಸ್ಬುಕ್ ನಲ್ಲಿ ಫೇಕ್ ಅಕೌಂಟ್..!! ಲಕ್ಷಾಂತರ ರೂ. ದೋಖಾ...!!
ಫೇಸ್ಬುಕ್ ನಲ್ಲಿ ನಕಲಿ ಖಾತೆ ಸೃಷ್ಟಿಸಿ ಲಕ್ಷಾಂತರ ರೂ. ವಂಚಿಸಿ ಪಂಗನಾಮವಿಡುತ್ತಿದ್ದ ಏಳು ಮಂದಿ ಖದೀಮರನ್ನು ಬೆಂಗಳೂರಿನ ಆಡುಗೋಡಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಮೈಸೂರಿನ ಶಶಿಕುಮಾರ್, ಸೈಯ್ಯದ್ ಕಾಸೀಫ್, ಮುದಾಸೀರ್, ಶಫಿ, ಸೈಯ್ಯದ್ ದಾನೀಶ್, ಇಮಿರಜಾಯ್ ಪಾಷಾ, ಅಜರುದ್ದೀನ್ ಬಂಧಿತ ಆರೋಪಿಗಳಾಗಿದ್ದಾರೆ. ಇವರಿಂದ ಒಂಭತ್ತು ಮೊಬೈಲ್, ಹನ್ನೊಂದು ಬ್ಯಾಂಕ್ ಪಾಸ್ಬುಕ್, ಆರು ಚೆಕ್ಬುಕ್, ಮೂವತ್ತೊಂದು ಎಟಿಎಂ ಕಾರ್ಡ್, ಒಂಭತ್ತು ಆಧಾರ್ ಕಾರ್ಡ್ ಗಳನ್ನು ಜಫ್ತಿ ಮಾಡಲಾಗಿದೆ.
ಇವರು ಮಾಡ್ತಿದ್ದ ಖತರ್ನಾಕ್ ಕೆಲಸ ಏನ್ ಗೊತ್ತಾ..?
ಫೇಸ್ಬುಕ್ ನಲ್ಲಿ ಪರಿಚಯಸ್ಥರ ಹಳೆಯ ಫ್ರೆಂಡ್ ನ ಡಿಪಿ ಹಾಕಿ ನಕಲಿ ಅಕೌಂಟ್ ಕ್ರಿಯೇಟ್ ಮಾಡಿ ಅವರಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುತ್ತಿದ್ದರು. ತನ್ನ ಸ್ನೇಹಿತನೇ ಎಂದು ಇದನ್ನು ನಂಬಿ ಅಸೆಪ್ಟ್ ಮಾಡಿ ಬಿಡುತ್ತಾರೆ. ಆಗ ಆರೋಪಿಗಳಲ್ಲಿ ಓರ್ವ ತಾನು ವಿದೇಶದಲ್ಲಿದ್ದೇನೆ. ಸ್ವಲ್ಪ ದಿನದಲ್ಲಿ ಭಾರತಕ್ಕೆ ಹಿಂತಿರುಗುತ್ತೇನೆ. ಹಣ ತೆಗೆದುಕೊಂಡು ಬಂದರೆ ಹೆಚ್ಚು ಟ್ಯಾಕ್ಸ್ ಕಟ್ಟಬೇಕಾಗುತ್ತದೆ.
ಸ್ವಲ್ಪ ಹಣ ನಿಮ್ಮಲ್ಲಿರಲಿ, ಅಕೌಂಟ್ ಡೀಟೆಲ್ಸ್ ಕೊಡಿ ಹಾಕ್ತೇನೆ ಎಂದು ಹೇಳಿ ಸುಮಾರು ಏಳು ಲಕ್ಷ ಹಣ ವರ್ಗಾವಣೆ ಮಾಡಿದಂತೆ ಮಾಡಿ ಸಿಟಿ ಬ್ಯಾಂಕ್ ನ ನಕಲಿ ರಶೀದಿಯನ್ನು ಫೇಸ್ಬುಕ್ ನಲ್ಲೇ ಕಳುಹಿಸುತ್ತಿದ್ದರು. ಆದರೆ ಮತ್ತೆ ನೋಡಿದಾಗ ಅವರ ಖಾತೆಗೆ ಹಣವೇ ಬಂದಿಲ್ಲ ಎಂಬುವುದನ್ನು ಪರಿಶೀಲಿಸಿದಾಗ ಇವರ ವಂಚನೆ ಬೆಳಕಿಗೆ ಬಂದಿದೆ.
ಹೀಗೆ ಅನೇಕ ರೀತಿಯಲ್ಲಿ ಇವರು ಜನರನ್ನು ಯಾಮಾರಿಸಿ ಒಟ್ಟು ಇವರ ಮೇಲೆ ಇಪ್ಪತ್ತೆಂಟು ಪ್ರಕರಣಗಳಿವೆ. ಸಾರ್ವಜನಿಕರು ದೂರನ್ನೂ ನೀಡಿದ್ದಾರೆ. ಇದೀಗ ಆರೋಪಿಗಳನ್ನು ಅರೆಸ್ಟ್ ಮಾಡಲಾಗಿದೆ.