ಸಿಎಂ ಸಿದ್ಧರಾಮಯ್ಯ ವಿರುದ್ಧ ಮೂಡಾ ಹಗರಣಕ್ಕೆ ಸಂಬಂಧಿಸಿದಂತೆ ಕೋಟ್ಯಾಂತರ ರೂ. ವಂಚನೆ ಆರೋಪವಿದೆ. ಕಾಂಗ್ರೆಸ್ ಬರೀ ಹಗರಣಗಳ ಕೂಪ ಎಂದು ವಿರೋಧ ಪಕ್ಷಗಳು ಟೀಕೆ ಮಾಡುತ್ತಲೇ ಇರುತ್ತದೆ. ಅಧಿಕಾರದ ಗದ್ದುಗೆಯೇರಿದ ಮೇಲೆ ಕಾಂಗ್ರೆಸ್ ನ ಅನೇಕ ವಂಚನೆ ಪ್ರಕರಣಗಳು ಬೆಳಕಿಗೆ ಬಂದಿದೆ ಕೂಡಾ. ಇದೀಗ ಸಿಎಂ ಸಿದ್ಧರಾಮಯ್ಯನವರ ಮೇಲೆ ದಾಖಲೆ ಸಹಿತ ಮತ್ತೊಂದು ಆರೋಪ ಕೇಳಿಬಂದಿದೆ.
ಬೇನಾಮಿ ಭೂಮಿ ಖರೀದಿಗೆ ಸಂಬಂಧಿಸಿ ಹೊಸ ದಾಖಲೆ ಬಿಡುಗಡೆ..!!
ಸ್ನೇಹಮಯಿ ಕೃಷ್ಣ ಅವರು ಮೈಸೂರಿನಲ್ಲಿ ಸಿದ್ದರಾಮಯ್ಯ ಅವರ ಕುಟುಂಬದ ಬೇನಾಮಿ ಭೂಮಿ ಖರೀದಿಗೆ ಸಂಬಂಧಿಸಿದ ಹೊಸ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ. 2006ರ ಅನ್ಯಕ್ರಾಂತ ಆದೇಶದ ನಂತರವೂ ಪಹಣಿಯಲ್ಲಿ ಮಾಲೀಕರ ಹೆಸರು ಇರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಭೂಮಿ ದಾನ ಮತ್ತು ಮಾರಾಟದಲ್ಲಿನ ಅಸಮತೋಲನವನ್ನು ಅವರು ಪ್ರಶ್ನಿಸಿದ್ದಾರೆ. ಈ ಪ್ರಕರಣದಲ್ಲಿ ಹಲವಾರು ಅಕ್ರಮಗಳು ನಡೆದಿವೆ ಎಂದು ಅವರು ಆರೋಪಿಸಿದ್ದಾರೆ.
ಬೇನಾಮಿ ಹೆಸರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬಸ್ಥರು ಜಮೀನು ಖರೀದಿ ಮಾಡಿದ್ದಾರೆ ಎಂದು ಆರೋಪದ ಮಳೆಸುರಿದಿರುವ ದೂರುದಾರ ಸ್ನೇಹಮಯಿ ಕೃಷ್ಣ ಮತ್ತಷ್ಟು ದಾಖಲೆಗಳನ್ನು ಬಿಡುಗಡೆ ಮಾಡಿ, ಹಲವು ಅನುಮಾನ ವ್ಯಕ್ತಪಡಿಸಿದ್ದಾರೆ.
ಏನಿದು ಬೇನಾಮಿ ಆಸ್ತಿ ಖರೀದಿ ಪ್ರಕರಣ..?
ಇದೀಗ ಬೇನಾಮಿ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಬಿಡುಗಡೆ ಮಾಡಿ ಸ್ನೇಹಮಯಿ ಕೃಷ್ಣ ಅವರು ಸಿಎಂ ಸಿದ್ಧರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಮೈಸೂರು ತಾಲೂಕು ಆಲನಹಳ್ಳಿ ಗ್ರಾಮದ ಸರ್ವೆ ನಂ 113/4ರಲ್ಲಿ 1 ಎಕರೆ ಭೂಮಿಗೆ ಸಂಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 1983ರ ಡಿಸೆಂಬರ್ 15 ರಂದು ಆಲನಹಳ್ಳಿಯ ಹನುಮೇಗೌಡ, ಹನುಮಯ್ಯ, ಕರಿಯಪ್ಪ ಹಾಗೂ ಕೆಂಪಮ್ಮ ಎಂಬುವರಿಂದ ಸಿದ್ದರಾಮಯ್ಯ ಅವರ ಬಾಮೈದನಾದ ಮಲ್ಲಿಕಾರ್ಜುನ ಸ್ವಾಮಿ ಭೂಮಿ ಪರ್ಚೇಸ್ ಮಾಡಿದ್ದಾರೆ.
1996ರಲ್ಲಿ ಅಂತಿಮ ಅಧಿಸೂಚನೆ ಆಗಿರುವ ಭೂಮಿಯನ್ನು ಮಲ್ಲಿಕಾರ್ಜುನ ಸ್ವಾಮಿ ಡಿನೋಟಿಫೈ ಮಾಡಿಸಿದ್ದು, 2006ರಲ್ಲಿ ಮಲ್ಲಿಕಾರ್ಜುನ್ ಸ್ವಾಮಿಯಿಂದ ಕೃಷಿ ಭೂಮಿಯನ್ನು ಅನ್ಯಕ್ರಾಂತ ಮಾಡಿಸಿ ಆದೇಶ ಹೊರಡಿಸಲಾಗಿದೆ. ಅದೇ ಭೂಮಿಯನ್ನು ಸಿದ್ದರಾಮಯ್ಯ ಪತ್ನಿ ಪಾರ್ವತಿಗೆ 2010 ಅಕ್ಟೋಬರ್ 20ರಲ್ಲಿ ಮಲ್ಲಿಕಾರ್ಜುನ್ ಸ್ವಾಮಿ ದಾನ ಮಾಡಿದ್ದಾರೆ. ಪಾರ್ವತಿ ಕೂಡ 2010ರ ನವೆಂಬರ್ 11ರಂದು ತಮ್ಮ ಮಗ ಯತೀಂದ್ರ ಸಿದ್ದರಾಮಯ್ಯಗೆ ದಾನ ಮಾಡಿದ್ದಾರೆ. ತಮ್ಮ ಹೆಸರಿಗೆ ಭೂಮಿ ಬಂದ ಒಂದೇ ತಿಂಗಳಲ್ಲಿ ಅದನ್ನು ದಾನ ಮಾಡಿದ್ದಾರೆ.
ಇದು ಎಷ್ಟರ ಮಟ್ಟಿಗೆ ಸರಿ..? ಯತೀಂದ್ರ ಸಿದ್ದರಾಮಯ್ಯ ತಮಗೆ ಬಂದ ಭೂಮಿಯನ್ನ 2011ರ ಮಾರ್ಚ್ 23 ರಂದು ಬೇರೆಯವರಿಗೆ ಮಾರಾಟ ಮಾಡಿದ್ದಾರೆ. ಇವೆಲ್ಲ ಏನು..? ಯಾವುದೇ ಭೂಮಿ ಕೊಡುಕೊಳ್ಳುವಿಕೆಗೆ ತನ್ನದೇ ಆದ ನಿಯಮಗಳಿಲ್ಲವೇ ಎಂದು ಸ್ನೇಹಮಯಿ ಕೃಷ್ಣ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಶ್ನೆ ಮಾಡಿ ಆರೋಪದ ಮಳೆಗರೆದಿದ್ದಾರೆ.