ದ.ಕ: ವಿಶ್ವದಾದ್ಯಂತ ಕೊರೋನಾ ಎಂಬ ಮಹಾಮಾರಿ ರೋಗ ಆತಂಕ ಹುಟ್ಟಿಸಿತ್ತು. ಸಾವು-ನೋವುಗಳನ್ನು ಅನುಭವಿಸುವಂತೆ ಮಾಡಿತ್ತು. ಹವಾಮಾನ ವೈಪರೀತ್ಯ, ಬದಲಾದ ಆಹಾರ ಪದ್ಧತಿ, ಬದಲಾದ ಜೀವನಶೈಲಿಯಿಂದ ಹೊಸ ಹೊಸ ರೋಗಗಳು ವಿಶ್ವಕ್ಕೆ ಕಾಲಿಡುತ್ತಿದೆ. ಮೊನ್ನೆ ತಾನೇ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ವ್ಯಕ್ತಿಯಲ್ಲಿ ಮಂಕಿಪಾಕ್ಸ್ ಪ್ರಕರಣ ವರದಿಯಾಗಿತ್ತು. ಇದೀಗ ಅಚ್ಚರಿ ಎಂಬಂತೆ ದ.ಕ ಜಿಲ್ಲೆಯ ಕಡಬ ತಾಲ್ಲೂಕಿನಲ್ಲಿ ಚಿಕನ್ ಪಾಕ್ಸ್ ರೋಗ ಲಗ್ಗೆಯಿಟ್ಟಿದ್ದು ಜನರಲ್ಲಿ ಆತಂಕ ಸೃಷ್ಟಿಸಿದೆ.
ದ.ಕ ಜನರಿಗೆ ಎದುರಾಯ್ತು ಸಿಡುಬು ರೋಗ ಆತಂಕ..!
ಕರಾವಳಿಯಲ್ಲಿ ತಾಪಮಾನ ದಿನೇದಿನೇ ಹೆಚ್ಚಾಗುತ್ತಿದೆ. ಸುಡುಬಿಸಿಲಿನಲ್ಲಿ ನಡೆದಾಡಲೂ ಕಷ್ಟವಾಗ್ತಿದೆ. ಈ ಮಧ್ಯೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಚಿಕನ್ ಪಾಕ್ಸ್ (ಸಿಡುಬು) ಆತಂಕ ಎದುರಾಗಿದ್ದು, ಕಡಬ ತಾಲ್ಲೂಕು ಒಂದರಲ್ಲೇ ವಿವಿಧ ಶಾಲೆಗಳ 21ಕ್ಕೂ ಅಧಿಕ ಮಕ್ಕಳಿಗೆ ಚಿಕನ್ ಪಾಕ್ಸ್ ಹರಡಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಆರೋಗ್ಯ ಇಲಾಖೆಯಿಂದ ದೊರೆತ ಮಾಹಿತಿಯನ್ವಯ ನೆಲ್ಯಾಡಿಯಲ್ಲಿ ಎರಡು ಶಾಲೆಗಳಲ್ಲಿ ಒಟ್ಟು ಒಂಭತ್ತು ಮಕ್ಕಳಿಗೆ, ಕುಕ್ಕೆ ಸುಬ್ರಹ್ಮಣ್ಯದಲ್ಲಿ ಆರು ಮಕ್ಕಳಿಗೆ, ಬೆಳ್ಳಾರೆ ಶಾಲೆಯಲ್ಲಿ ಒಂದು ಮಗುವಿಗೆ, ಲಾವತ್ತಡ್ಕದಲ್ಲಿ ಒಂದು ಮಗುವಿಗೆ, ಗೊಳಿತ್ತೊಟ್ಟುವಿನಲ್ಲಿ ಒಂದು ಮಗುವಿಗೆ ಸೇರಿದಂತೆ ಒಟ್ಟು 21 ಮಕ್ಕಳಿಗೆ ಚಿಕನ್ ಪಾಕ್ಸ್ ಹರಡಿದೆ. ಇದು ಸಾಂಕ್ರಾಮಿಕ ರೋಗವಾಗಿರುವುದರಿಂದ ಶಾಲೆಯಲ್ಲಿ ಮಕ್ಕಳಿಗೆ ಒಬ್ಬರಿಂದೊಬ್ಬರಿಗೆ ಹರಡುವ ಸಾಧ್ಯತೆ ಇದೆ ಎಂದು ವೈದ್ಯರು ತಿಳಿಸಿದ್ದಾರೆ.
ಎಚ್ಚರಿಕೆ ವಹಿಸುವಂತೆ ಆರೋಗ್ಯ ಇಲಾಖೆಯಿಂದ ಖಡಕ್ ಆದೇಶ..!
ರೋಗ ಹರಡಿರುವ ಶಾಲೆಗಳಲ್ಲಿ ಮುನ್ನೆಚ್ಚರಿಕೆ ಕ್ರಮ ವಹಿಸಬೇಕು. ಶಾಲಾ ಮಕ್ಕಳು ಸಾಧ್ಯವಾದಷ್ಟು ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಆಡಳಿತ ಮಂಡಳಿಗೆ ಆರೋಗ್ಯ ಇಲಾಖೆ ಖಡಕ್ ಆದೇಶವನ್ನು ನೀಡಿದೆ. ರೋಗ ಕಡಿಮೆಯಾಗುವವರೆಗೂ ಮಕ್ಕಳಿಗೆ ರಜೆ ನೀಡುವಂತೆ ಮತ್ತು ಶಾಲೆಗೆ ಕಳುಹಿಸದಂತೆ ಶಾಲೆಗಳಿಗೆ ಮತ್ತು ಪೋಷಕರಿಗೆ ಜಿಲ್ಲಾ ಮತ್ತು ತಾಲೂಕು ಆರೋಗ್ಯಾಧಿಕಾರಿಗಳು ಸೂಚನೆ ನೀಡಿದ್ದಾರೆ. ಇದು ಅಪಾಯಕಾರಿ ರೋಗ ಅಲ್ಲದಿದ್ದರೂ ಆದಷ್ಟು ಜಾಗರೂಕತೆ ವಹಿಸುವುದು ಮುಖ್ಯವಾಗಿದೆ.