ಕೇರಳ: ಅಂಗನವಾಡಿಯಲ್ಲಿ ಮಕ್ಕಳ ಆರೋಗ್ಯ ಮತ್ತು ಸರ್ವತೋಮುಖ ಬೆಳವಣಿಗೆಯ ಉದ್ದೇಶದಿಂದ ಪೌಷ್ಟಿಕಾಂಶಯುಕ್ತ ಆಹಾರಗಳನ್ನು ನೀಡಲಾಗುತ್ತದೆ. ಉಪ್ಪಿಟ್ಟು, ಧಾನ್ಯಗಳು, ಮೊಟ್ಟೆ, ಹಾಲು, ಚಿಕ್ಕಿ ಹೀಗೆ ಉತ್ತಮ ಆಹಾರಗಳನ್ನೇ ಪೂರೈಸಲಾಗುತ್ತದೆ. ಆದರೆ ಅದನ್ನು ತಿಂದು ತಿಂದು ಸುಸ್ತಾಗಿದೆ ಎಂದು ಅಂಗನವಾಡಿ ಬಾಲಕನೊಬ್ಬ ಹೊಸದೊಂದು ಆಹಾರಗಳನ್ನು ನೀಡಲು ಡಿಮ್ಯಾಂಡ್ ಮಾಡಿದ್ದಾನೆ. ಆತನ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು.
ಉಪ್ಪಿಟ್ಟು ಬದಲಿಗೆ ಬಿರಿಯಾನಿ, ಕಬಾಬ್ ಕೊಡಿ ಪ್ಲೀಸ್....!!
ಅಂಗನವಾಡಿಯಲ್ಲಿ ಉಪ್ಪಿಟ್ಟು ಕೊಡೋದರ ಬದಲಿಗೆ ಬಿರಿಯಾನಿ ಮತ್ತು ಚಿಕನ್ ಫ್ರೈ ನೀಡುವಂತೆ ಬಾಲಕ ಮಾಡಿದ ಮನವಿಗೆ ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಒಪ್ಪಿಗೆ ಸೂಚಿಸಿದ್ದಾರೆ. ಊಟದ ಮೆನುವಿನಲ್ಲಿ ಉಪ್ಪಿಟ್ಟು ಬದಲಿಗೆ ಬಿರಿಯಾನಿ, ಚಿಕನ್ ಫ್ರೈ ನೀಡಬೇಕು ಎಂದು ಪುಟ್ಟ ಬಾಲಕ ಮನವಿ ಮಾಡಿರುವ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ವೀಡಿಯೋ ನೋಡಿದ ಸಚಿವರು ಬಾಲಕನ ಬೇಡಿಕೆಗೆ ಇದೀಗ ಸ್ಪಂದಿಸಿದ್ದಾರೆ. ಅಂಗನವಾಡಿಗಳಲ್ಲಿನ ಆಹಾರ ಮೆನುವನ್ನು ಪರಿಶೀಲಿಸಲು ಮತ್ತು ಪರಿಷ್ಕರಿಸಲು ಆದಷ್ಟು ಶೀಘ್ರವಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ.
ಲಕ್ಷಾಂತರ ವೀಕ್ಷಣೆ ಪಡೆದಿದ್ದ ವೀಡಿಯೋದಲ್ಲಿ ಏನಿತ್ತು ಗೊತ್ತಾ..?
ಶಂಕು ಎಂಬ ಪುಟ್ಟ ಬಾಲಕ ತನ್ನದೇ ಆದ ಮುಗ್ಧ ರೀತಿಯಲ್ಲಿ ತನ್ನ ಅಂಗನವಾಡಿಯಲ್ಲಿ ರುಚಿಕರ ಊಟ ಬೇಕು. ಉಪ್ಪಿಟ್ಟು ತಿಂದು ತಿಂದು ಬಾಯಿ ಸಪ್ಪೆ ಆಗಿದೆ. ಅದರ ಬದಲು ಬಿರಿಯಾನಿ, ಕಬಾಬ್ ಕೊಡ್ತೀರಾ ಎಂದು ಕೇಳಿ ಕೊಂಡಿದ್ದಾನೆ. ಜ.30 ರಂದು ಸಾಮಾಜಿಕ ಮಾಧ್ಯಮದಲ್ಲಿ ವೀಡಿಯೋವನ್ನು ಶೇರ್ ಮಾಡಲಾಗಿತ್ತು.
ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನಲ್ಲಿ ಲಕ್ಷಾಂತರ ವೀಕ್ಷಣೆಗಳನ್ನು ಪಡೆದಿರುವ ವೀಡಿಯೋ ಜನರ ಮೆಚ್ಚುಗೆ ಗಳಿಸಿತ್ತು. ಬಾಲಕನ ಮುಗ್ಧ ಮಾತಿಗೆ ಕೊನೆಗೆ ಸಚಿವರೂ ಕರಗಿ ಹೋಗಿದ್ದಾರೆ.