ಆನೇಕಲ್: ಅನುಮಾನ ಅನ್ನೋದು ಒಂದು ರೀತಿಯ ಖಾಯಿಲೆಯಿದ್ದಂತೆ. ಅದಕ್ಕೆ ಮದ್ದಿಲ್ಲ. ಅನೇಕ ಸಂಬಂಧಗಳು ಹಾಳಾಗೋದು ಕೂಡ ಇದರಿಂದಲೇ. ಅತಿಯಾದರೆ ಅಮೃತವೂ ವಿಷ ಎಂಬ ಮಾತಿದೆ. ಅದರಂತೆ ಅನುಮಾನ ಹೆಚ್ಚಾದರೂ ಕೂಡಾ ಅದು ದುರಂತಕ್ಕೆ ಕಾರಣವಾಗುತ್ತದೆ ಅನ್ನೋದಕ್ಕೆ ಈ ದುರ್ಘಟನೆಯೇ ಸಾಕ್ಷಿ ನೋಡಿ...
ಪತ್ನಿಯ ಶೀಲ ಶಂಕಿಸಿ ಹತ್ಯೆ ಮಾಡಿಬಿಟ್ಟ ಪಾಪಿ ಗಂಡ...!!
ತಾಳಿ ಕಟ್ಟಿದ ಹೆಂಡತಿಯ ಶೀಲವನ್ನೇ ಅವಮಾನಿಸಿ ಆಕೆಯನ್ನು ಚಾಕುವಿನಿಂದ ಇರಿದು ಗಂಡನೋರ್ವ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಆನೇಕಲ್ ನ ಹೆಬ್ಬಗೋಡಿ ರಾಮಯ್ಯ ಬಡಾವಣೆಯಲ್ಲಿ ನಡೆದಿದೆ. ತಿರುಪಾಳ್ಯ ನಿವಾಸಿ ಗಂಗಾ ಮೃತಪಟ್ಟ ಗೃಹಿಣಿ. ಈಕೆಯ ಗಂಡ ಮೋಹನ್ ರಾಜ್ ಕೊಲೆ ಮಾಡಿದ ಆರೋಪಿ. ದಾಂಪತ್ಯಕ್ಕೆ ಕಾಲಿಟ್ಟು ವರ್ಷವಾಗಿದ್ದರೂ ಕೂಡಾ ಮೋಹನ್ ಗೆ ಪತ್ನಿಯ ಮೇಲೆ ಇಲ್ಲಸಲ್ಲದ ಕಾರಣಕ್ಕೆ ಅನುಮಾನ. ಪ್ರತೀ ದಿನ ಒಂದಲ್ಲ ಒಂದು ವಿಷಯಕ್ಕೆ ಕ್ಯಾತೆ ತೆಗೆದು ಗಲಾಟೆ ಮಾಡುತ್ತಿದ್ದ.
ಪತಿ-ಪತ್ನಿಯ ಗಲಾಟೆ ಕೊಲೆಯಲ್ಲಿ ಅಂತ್ಯ...!!
ಪ್ರತಿನಿತ್ಯ ಮನೆಯಲ್ಲಿ ಪತ್ನಿಯ ಶೀಲವನ್ನು ಶಂಕಿಸಿ ಮೋಹನ್ ರಾಜ್ ಜಗಳ ಮಾಡುತ್ತಿದ್ದ. ಅದೇ ರೀತಿ ನಡೆದ ಜಗಳ ಮಿತಿ ಮೀರಿ ತಾರಕಕ್ಕೇರಿ ಬೀದಿ ರಂಪಾಟವಾಗಿದೆ. ಈ ಸಂದರ್ಭ ತಾಳ್ಮೆ ಕಳೆದುಕೊಂಡ ಮೋಹನ್ ಪತ್ನಿಯ ಹೊಟ್ಟೆಗೆ ಚಾಕುವಿನಿಂದ ಇರಿದು ರಸ್ತೆಯ ಮಧ್ಯದಲ್ಲೇ ಹತ್ಯೆಗೈದಿದ್ದಾನೆ. ಹೆಬ್ಬಗೋಡಿ ಪೊಲೀಸರು ಸ್ಥಳಕ್ಕೆ ಆಗಮಿಸಿ ಆರೋಪಿ ಮೋಹನ್ ರಾಜ್ ನನ್ನು ವಶಕ್ಕೆ ಪಡೆದಿದ್ದಾರೆ.