ಮೂಲ್ಕಿ: ಅತ್ಯಂತ ಶೀಘ್ರವಾಗಿ ಶ್ರೀಮಂತರಾಗಬೇಕಾದರೆ ಅನೇಕ ರೀತಿಯ ಸುಲಭದ ಮತ್ತು ತಪ್ಪು ದಾರಿಗಳಿವೆ. ಅದರಲ್ಲಿ ಕಳ್ಳತನವೂ ಒಂದು. ತಂತ್ರಜ್ಞಾನ ಇಷ್ಟು ಮುಂದುವರೆದ ಈ ಕಾಲದಲ್ಲಿ ಕಳ್ಳತನ ಮಾಡಿ ಸೇಫ್ ಆಗ್ಬೋದು ಅಂತ ಅದೇಗೆ ಯೋಚಿಸ್ತಾರೋ ಗೊತ್ತಿಲ್ಲ. ಇದೀಗ ಮಂಗಳೂರಿನ ಖದೀಮನೊಬ್ಬ ನೇರವಾಗಿ ನ್ಯಾಯಧೀಶರ ಮನೆಗೆ ಸ್ಕೆಚ್ ಹಾಕಿದ್ದಾನೆ.
ನ್ಯಾಯಧೀಶರ ಮನೆಗೆ ನುಗ್ಗಿದ ಕಳ್ಳ...? ಆಮೇಲೆನಾಯ್ತು..?
ನ್ಯಾಯಾಧೀಶರ ಮನೆಗೆ ನುಗ್ಗಿದ ಕಳ್ಳರು ಕಳ್ಳತನಕ್ಕೆ ಯತ್ನಿಸಿ ಏನೂ ಸಿಗದೆ ಬರಿಗೈಯಲ್ಲಿ ವಾಪಸ್ಸಾಗಿರುವ ಘಟನೆ ಮೂಲ್ಕಿ ವ್ಯಾಪ್ತಿಯ ಪಕ್ಷಿಕೆರೆ ಸಮೀಪ ಕೊಯ್ಕುಡೆ ಬಳಿ ನಡೆದಿದೆ. ಮೂಲತಃ ಹಳೆಯಂಗಡಿ ಕಿನ್ನಿಗೋಳಿ ಹೆದ್ದಾರಿಯ ಪಕ್ಷಿಕೆರೆ ನಿವಾಸಿ, ನ್ಯಾಯಧೀಶರೂ ಆಗಿರುವ ಮುಮ್ತಾಝ್ ಅವರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಈ ಘಟನೆ ನಡೆದಿದೆ.
ಕಳ್ಳರು ಮನೆಯ ಎದುರಿನ ಬಾಗಿಲ ಲಾಕನ್ನು ಭಾರವಾದ ಸಾಧನದಿಂದ ಒಡೆದು ಒಳಗೆ ನಾಲ್ಕು ಕಪಾಟಿನಲ್ಲಿರುವ ಬಟ್ಟೆ ಬರೆಗಳನ್ನು ಎಳೆದು ಚಲ್ಲಾ ಪಿಲ್ಲಿ ಮಾಡಿ ಜಾಲಾಡಿದ್ದು ಏನೂ ಸಿಗದೆ ಬರಿಗೈಯಲ್ಲಿ ವಾಪಾಸಾಗಿದ್ದಾರೆ. ಮನೆಯ ಸಿಸಿ ಕ್ಯಾಮೆರಾವನ್ನು ಬೇರೆ ಕಡೆಗೆ ತಿರುಗಿಸಿದ್ದ ಕಳ್ಳರು ವ್ಯವಸ್ಥಿತ ರೀತಿಯಲ್ಲಿ ಕಳ್ಳತನಕ್ಕೆ ಯತ್ನಿಸಿದ್ದಾರೆ.
ನ್ಯಾಯಾಧೀಶರಾದ ಮುಮ್ತಾಝ್ ರವರು ಬೆಂಗಳೂರಿನಲ್ಲಿ ವಾಸ್ತವ್ಯವಿದ್ದು 15 ದಿನಗಳಿಗೊಮ್ಮೆ ಮಂಗಳೂರಿನ ಮನೆ ಕಡೆ ಬಂದು ಹೋಗುತ್ತಿದ್ದರು ಎಂದು ಸ್ಥಳೀಯರು ತಿಳಿಸಿದ್ದಾರೆ. ಇದೇ ಮಾಹಿತಿಯನ್ನು ಗಮನದಲ್ಲಿಟ್ಟುಕೊಂಡು ಕಳ್ಳರು ಕಳ್ಳತನಕ್ಕೆ ಯತ್ನಿಸಿದ್ದಾರೆ.
ಹಣ, ಒಡವೆ ಬೇರೆ ಕಡೆ ಇಟ್ಟಿದ್ದರಿಂದ ಅದು ಸೇಫ್...!!
ಬೆಲೆಬಾಳುವ ಒಡವೆ ಹಾಗೂ ಹಣವನ್ನು ಮನೆಯಲ್ಲಿ ಬೇರೆ ಕಡೆ ಅಡಗಿಸಿ ಇಟ್ಟಿದ್ದರಿಂದ ದುಬಾರಿ ಮೌಲ್ಯದ ಹಣ, ಒಡವೆ ಕಳ್ಳತನ ಆಗುವ ಸಂದರ್ಭ ತಪ್ಪಿದೆ. ಸ್ಥಳಕ್ಕೆ ಮಂಗಳೂರು ಎಸಿಪಿ ಶ್ರೀಕಾಂತ್, ಮುಲ್ಕಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಅನಿತಾ ಮತ್ತಿತರರು ಭೇಟಿ ನೀಡಿ ಪರಿಶೀಲಿಸಿದ್ದು , ಶ್ವಾನ ದಳ ಬೆರಳಚ್ಚು ತಜ್ಞರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.
ಹಳೆಯಂಗಡಿ ಗ್ರಾಮ ಪಂಚಾಯತ್ ಸದಸ್ಯ ಅಬ್ದುಲ್ ಖಾದರ್ ಮಾತನಾಡಿ ಜಡ್ಜ್ ಮನೆಯಲ್ಲೇ ಕಳ್ಳತನ ನಡೆಸಲು ಯತ್ನಿಸಿರುವವರು ಇನ್ನು ನಾವೆಲ್ಲ ಅವರಿಗೆ ಏನು ಲೆಕ್ಕ..? ಈ ಪ್ರಕರಣದಲ್ಲಿ ವಿಫಲ ಯತ್ನ ನಡೆದಿದ್ದು ಪರಿಸರದ ಜನರಲ್ಲಿ ಮಾತ್ರ ಆತಂಕದ ವಾತಾವರಣ ಉಂಟಾಗಿದೆ. ರಾತ್ರಿ ಹೊತ್ತು ಸೂಕ್ತ ಗಸ್ತು ಏರ್ಪಡಿಸುವಂತೆ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.