ಆಗ್ರಾ : ಕೆಲವೊಮ್ಮೆ ಏನಾದರೊಂದು ಮಹತ್ತರ ಕಾರ್ಯ ನಡೀಬೇಕು ಅನ್ನೋವಷ್ಟರಲ್ಲಿ ಯಾವುದಾದರೂ ರೀತಿಯಲ್ಲಿ ದುರಂತ ಸಂಭವಿಸುತ್ತದೆ. ಕಷ್ಟಪಟ್ಟು ಓದಿ, ಸವಾಲುಗಳನ್ನು ಸ್ವೀಕರಿಸಿ ಇನ್ನೇನು ಉನ್ನತ ಹುದ್ದೆ ಅಲಂಕರಿಸಬೇಕು ಅನ್ನುವಷ್ಟರಲ್ಲಿ ಕೂಡಾ ಅವಘಡಗಳು ಸಂಭವಿಸುತ್ತದೆ. ಇತ್ತೀಚೆಗೆ ಡಿವೈಎಸ್ಪಿ ಹುದ್ದೆ ಅಲಂಕರಿಸಬೇಕಾಗಿದ್ದ ಯುವ ತರುಣ ಅಧಿಕಾರಿಯೊಬ್ಬ ಅಪಘಾತದಲ್ಲಿ ದಾರುಣ ಅಂತ್ಯ ಕಂಡ ಘಟನೆ ಎಲ್ಲರನ್ನು ಆಶ್ಚರ್ಯಚಕಿತರನ್ನಾಗಿಸಿತ್ತು. ಇದೀಗ ಅಂತಹುದೇ ಹೃದಯವಿದ್ರಾವಕ ಘಟನೆಯೊಂದು ಶಿವಮೊಗ್ಗದಲ್ಲಿ ನಡೆದಿದೆ.
ತರಬೇತಿ ವೇಳೆ ತೆರೆದುಕೊಳ್ಳದ ಪ್ಯಾರಚೂಟ್, ವಾಯುಪಡೆ ಅಧಿಕಾರಿ ದುರಂತ ಸಾವು...!
ತರಬೇತಿ ವೇಳೆ ಪ್ಯಾರಾಚೂಟ್ ತೆರೆದುಕೊಳ್ಳದೆ ಸಾವಿರದ ಐನೂರು ಅಡಿ ಎತ್ತರದಿಂದ ಕೆಳಗೆ ಬಿದ್ದು ಶಿವಮೊಗ್ಗ ಜಿಲ್ಲೆಯ ಹೊಸನಗರ ಮೂಲದ ವಾಯುಪಡೆಯ ವಾರೆಂಟ್ ಅಧಿಕಾರಿ ಮಂಜುನಾಥ್ ಜಿ.ಎಸ್ (36) ಸಾವನ್ನಪ್ಪಿದ್ದಾರೆ. ಉತ್ತರ ಪ್ರದೇಶದ ಆಗ್ರಾದಲ್ಲಿ ಈ ಘಟನೆ ನಡೆದಿದ್ದು, ವಿಮಾನದಿಂದ ಹಾರಿದ ನಂತರ ಪ್ಯಾರಾಚೂಟ್ ತೆರೆದುಕೊಳ್ಳದೆ ಮಂಜುನಾಥ್ ಅವರು ಕೆಳಗೆ ಬಿದ್ದು ಮೃತಪಟ್ಟಿದ್ದಾರೆ.
ಆಗ್ರಾದಲ್ಲಿ ಭಾರತೀಯ ವಾಯು ಸೇನೆಗೆ ಸೇರಿದ ಮಾಲ್ಪುರ ಪ್ಯಾರಾಚೂಟ್ ಡ್ರಾಪ್ ಜೋನ್‌ನಲ್ಲಿ ತರಬೇತಿ ನಡೆಯುತ್ತಿತ್ತು. ವಾಯುಸೇನೆಯ 12 ಅಧಿಕಾರಿಗಳು ಪ್ಯಾರಾಚೂಟ್ ತರಬೇತಿಗೆ ವಿಮಾನದಿಂದ ಜಿಗಿದಿದ್ದರು. 11 ಮಂದಿ ಮಾತ್ರ ಪ್ಯಾರಾಚೂಟ್ ಬಳಸಿ ಸುರಕ್ಷಿತವಾಗಿ ಲ್ಯಾಂಡ್ ಆಗಿದ್ದರು. ಆದರೆ ವಾರಂಟ್ ಆಫೀಸರ್ ಮಂಜುನಾಥ್ ಜಿ.ಎಸ್ ನಾಪತ್ತೆಯಾಗಿದ್ದರು ಎಂದು ವರದಿಯಾಗಿತ್ತು.
ಶೋಧ ಕಾರ್ಯ ನಡೆಸಿದಾಗ ಜಮೀನಿನಲ್ಲಿ ಪತ್ತೆಯಾದ ಮಂಜುನಾಥ್ ಮೃತದೇಹ..!
ಮಂಜುನಾಥ್ ಅವರಿಗಾಗಿ ಶೋಧ ಕಾರ್ಯ ನಡೆಸಿದಾಗ ಸಮೀಪದ ಜಮೀನಿನಲ್ಲಿ ದೇಹ ಪತ್ತೆಯಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಪರೀಕ್ಷಿಸಿದ ವೈದ್ಯರು ಮಂಜುನಾಥ್ ಅವರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಈ ಹಿಂದೆಯು ಇಂತಹ ಘಟನೆಗಳು ಸಂಭವಿಸಿ ವಾಯುಪಡೆಯ ಅಧಿಕಾರಿಗಳು ಮೃತಪಟ್ಟಿದ್ದರು ಎಂಬ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ. ವಾಯುಪಡೆ ಅಧಿಕಾರಿ ಕೊನೆಯುಸಿರೆಳೆದ ಕಾರಣ ಇಡೀ ವಾಯುಪಡೆ ಸಿಬ್ಬಂದಿ, ಕುಟುಂಬ ಸಂತಾಪವನ್ನು ವ್ಯಕ್ತಪಡಿಸಿದೆ.