ಉಡುಪಿ|ಸೈಬರ್ ವಂಚನೆಗೆ ಬ್ರೇಕ್ ಹಾಕಲು ಸಜ್ಜಾಯ್ತು ಪೊಲೀಸ್ ಇಲಾಖೆ...! ಬೀಟ್ ವ್ಯಾಪ್ತಿಯಲ್ಲಿ ವಾಟ್ಸಾಪ್ ಗ್ರೂಪ್ ರಚನೆ...!

  • 10 Feb 2025 03:10:40 PM

ಉಡುಪಿ :ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಮ್ ಅಪರಾಧಗಳು ಹೆಚ್ಚಾಗಿ ನಡೆಯುತ್ತಲೇ ಇದೆ. ಸೈಬರ್ ದುಷ್ಕರ್ಮಿಗಳು ಡಿಜಿಟಲ್ ವಂಚನೆ ಮಾಡುವುದರ ಮುಖೇನ ಕೋಟ್ಯಾಂತರ ರೂಪಾಯಿ ಪಂಗನಾಮ ಹಾಕುತ್ತಾರೆ. ಇದೀಗ ಸೈಬರ್ ವಂಚನೆ ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸರು ಹಲವಾರು ಪ್ರಕ್ರಿಯೆಗಳನ್ನು ತೆಗೆದುಕೊಂಡಿದ್ದು ಸೈಬರ್ ವಂಚನೆಗೆ ಕಡಿವಾಣ ಹಾಕಲು ಸನ್ನದ್ಧರಾಗಿ ನಿಂತಿದ್ದಾರೆ.

 

ವಾಟ್ಸಾಪ್ ಗ್ರೂಪ್ ರಚಿಸಿರುವ ಉದ್ದೇಶವೇನು ಗೊತ್ತಾ...?

 

ಜನರಿಗೆ ಸೈಬರ್ ವಂಚನೆಯ ಬಗ್ಗೆ ಅರಿವು ಮೂಡಿಸಲು ಮುನ್ನೆಚ್ಚರಿಕೆ ಹಾಗೂ ಸೂಚನೆ ನೀಡುವ ಉದ್ದೇಶದಿಂದ ಈ ವಾಟ್ಸಾಪ್ ಗ್ರೂಪ್ ಗಳನ್ನು ರಚಿಸಲಾಗುತ್ತಿದೆ. ಜಿಲ್ಲೆಯಲ್ಲಿ ಒಟ್ಟು ಇಪ್ಪತ್ತನಾಲ್ಕು ಪೊಲೀಸ್ ಠಾಣೆಗಳಿದ್ದು ಆಯಾ ಠಾಣಾ ವ್ಯಾಪ್ತಿಯಲ್ಲಿ ಹದಿನೈದರಿಂದ ಇಪ್ಪತ್ತರಷ್ಟು ಬೀಟ್ ಗಳಿವೆ. ಒಂದೊಂದು ಗ್ರೂಪ್ ಗಳಲ್ಲಿ ತಲಾ ಇನ್ನೂರ ಐವತ್ತು ಮಂದಿ ಸದಸ್ಯರು ಇರಲಿದ್ದಾರೆ. ಈ ವಾಟ್ಸಾಪ್ ಗ್ರೂಪ್ ಗಳು ಸಕ್ರಿಯವಾಗಿ ಕಾರ್ಯಾಚರಿಸಲಿದ್ದು ವಿವಿಧ ಎಚ್ಚರಿಕೆ ಸಂದೇಶಗಳನ್ನು ಜನರಿಗೆ ತಲುಪಿಸಲಿದೆ. 

 

ಕ್ಲಿಕ್ ಮಾಡುವ ಮುನ್ನ ಹುಷಾರ್...!!

 

ಸ್ಮಾರ್ಟ್ಫೋನ್ ಹೊಂದಿರುವ ಪ್ರತಿಯೊಬ್ಬರ ಬಳಿಯೂ ಕನಿಷ್ಠ ಹತ್ತಕ್ಕಿಂತಲೂ ಅಧಿಕ ವಿವಿಧ ಪ್ರಕಾರದ ವಾಟ್ಸಾಪ್ ಗ್ರೂಪ್ ಗಳು ಇರುವ ಕಾರಣ ಅನಗತ್ಯ ಸಂದೇಶಗಳು ಮತ್ತು ಫೈಲ್ ಗಳು ಬರೋದು ಸಹಜ. ವಿವಿಧ ಬ್ಯಾಂಕಿನ ಹೆಸರಿನಲ್ಲಿ ಎಪಿಕೆ ಫೈಲ್ ಗಳು ಕೂಡಾ ಬರುತ್ತಿದ್ದು ಇವುಗಳನ್ನು ಕ್ಲಿಕ್ ಮಾಡಿದ ತಕ್ಷಣ ಮೊಬೈಲ್ ಹ್ಯಾಕ್ ಆಗುವ ಸಂಭವ ಹೆಚ್ಚು. ಆದ್ದರಿಂದ ಈ ಬಗ್ಗೆ ಹೆಚ್ಚು ಜನ ಸದಾ ಜಾಗ್ರತೆಯಿಂದ ಇರಬೇಕು ಎಂದು ಸೆನ್ ಠಾಣೆಯ ಪೊಲೀಸ್ ನಿರೀಕ್ಷಕ ಮನವಿಯನ್ನು ಮಾಡಿಕೊಂಡಿದ್ದಾರೆ.