ಇದೆಂಥಾ ಮರ್ಯಾದೆ ಹತ್ಯೆ..!! ಲವ್ ಮಾಡಿದ ಕಾರಣಕ್ಕೆ ಮಗಳನ್ನೇ ಕೊಚ್ಚಿ ಕೊಲೆ ಮಾಡಿದ ಪಾಪಿ ತಂದೆ...!!

  • 10 Feb 2025 03:16:28 PM

ಬೀದರ್:ಹಿಂದಿನ ಕಾಲದಲ್ಲಿ ಮರ್ಯಾದಾ ಹತ್ಯೆ ಎನ್ನುವಂತಹ ನೀಚ ಪದ್ಧತಿ ಅಸ್ತಿತ್ವದಲ್ಲಿತ್ತು. ಇಂದಿಗೂ ಕೆಲವು ಕಡೆ ಈ ಪದ್ಧತಿ ಅಸ್ತಿತ್ವದಲ್ಲಿದೆ. ಕುಟುಂಬದ ಘನತೆ ಗೌರವಕ್ಕೆ ಧಕ್ಕೆ ತರುವ ಏನಾದರೂ ಕೃತ್ಯ ನಡೆಸಿದರೆ ಅವರನ್ನು ಹತ್ಯೆ ಮಾಡಲಾಗುತ್ತಿತ್ತು. ಇದೀಗ ಬೀದರ್ ನಲ್ಲೂ ಇಂತಹುದೇ ಒಂದು ಅಮಾನವೀಯ ಘಟನೆಯೊಂದು ನಡೆದಿದೆ.

 

ಪ್ರೀತಿ ಮಾಡಿದಕ್ಕೆ ಹೆತ್ತ ಮಗಳನ್ನೇ ಕೊಂದ ಪಾಪಿ ಗಂಡ..!!

 

ಯುವಕನೋರ್ವನನ್ನು ಪ್ರೀತಿ ಮಾಡಿದ್ಲು ಎಂಬ ಒಂದೇ ಕಾರಣಕ್ಕೆ ರೊಚ್ಚಿಗೆದ್ದು ಹೆತ್ತ ತಂದೆಯೇ ದೊಣ್ಣೆಯಿಂದ ಹೊಡೆದು ಮಗಳನ್ನೇ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಬೀದರ್ ಜಿಲ್ಲೆಯ ಔರಾದ್ ತಾಲೂಕಿನ ಬರಗೇನ್ ತಾಂಡಾದಲ್ಲಿ ನಡೆದಿದೆ. ಮೋನಿಕಾ ಮೋತಿರಾಮ ಜಾಧವ್ (18) ಕೊಲೆಯಾದ ದುರ್ದೈವಿ. ಮಗಳನ್ನು ಕೊಲೆ ಮಾಡಿ ತಂದೆ ಮೋತಿರಾಮ ಎಸ್ಕೇಪ್ ಆಗಿದ್ದಾನೆ. ಪ್ರೀತಿ-ಪ್ರೇಮದಿಂದ ದೂರವಿರುವಂತೆ ಮಗಳಿಗೆ ತಂದೆ ಬುದ್ಧಿಮಾತು ಹೇಳಿದ್ದಾನೆ.

 

ಅಲ್ಲದೇ ನಿನಗೆ ಒಳ್ಳೆಯ ಹುಡುಗನನ್ನ ನೋಡಿ ಮದುವೆ ಮಾಡುತ್ತೇನೆ ಎಂದು ಕೂಡಾ ಭರವಸೆ ನೀಡಿದ್ದಾರೆ. ಈ ವೇಳೆ ತಂದೆಯ ಎದುರು ಮಗಳು ಪ್ರೀತಿ ವಿಷಯ ಪ್ರಸ್ತಾಪಿಸಿದ್ದಲ್ಲದೇ ಅವನನ್ನೇ ಮದುವೆ ಆಗುತ್ತೇನೆ ಎಂದು ಗಲಾಟೆ ಮಾಡಿ ಹಠ ಹಿಡಿದಿದ್ದಾಳೆ. ಬುದ್ಧಿಮಾತು ಹೇಳಿದ್ರೂ ಕೇಳದ ಹಿನ್ನೆಲೆ ಆಕ್ರೋಶಗೊಂಡ ತಂದೆ ಮಗಳನ್ನು ಕೊಲೆ ಮಾಡಿದ್ದಾನೆ.

 

ಮನೆಯಲ್ಲಿ ಯಾರೂ ಇಲ್ಲದ ವೇಳೆ ನಡೆಯಿತು ದುರಂತ..!!

 

ಮನೆಯಲ್ಲಿ ಯಾರೂ ಇಲ್ಲದ ವೇಳೆಯನ್ನು ಈತ ಸದುಪಯೋಗಪಡಿಸಿಕೊಂಡಿದ್ದಾನೆ. ಮಗಳ ಮೇಲೆ ಮಾರಾಣಾಂತಿಕ ಹಲ್ಲೆ ಮಾಡಿದ್ದು, ಆ ರಭಸಕ್ಕೆ ತೀವ್ರ ರಕ್ತಸ್ರಾವ ಆಗಿ ಸ್ಥಳದಲ್ಲೇ ಮೋನಿಕಾ ಮೃತಪಟ್ಟಿದ್ದಾರೆ. ಈ ಕುರಿತು ಸಂತಪೂರ ಪೊಲೀಸ್ ಠಾಣೆಯಲ್ಲಿ ಮೃತ ಯುವತಿಯ ತಾಯಿ ಭಾಗುಬಾಯಿ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಾಗಿ ಬಲೆ ಬೀಸಿದ್ದಾರೆ. ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ.