ಉತ್ತರ ಪ್ರದೇಶ: ಉತ್ತರಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಕಳೆದ ಅನೇಕ ದಿನಗಳಿಂದ ಅದ್ಧೂರಿಯಾಗಿ ಮಹಾಕುಂಭಮೇಳ ನಡೆಯುತ್ತಿದೆ. ಅನೇಕ ಗಣ್ಯರು, ದೇಶದ ಪ್ರಧಾನಿ, ಸೆಲೆಬ್ರೆಟಿಗಳು ಭೇಟಿ ನೀಡಿ ಪುಣ್ಯಸ್ನಾನ ಮಾಡುತ್ತಿದ್ದಾರೆ. ಕುಂಭಮೇಳದಲ್ಲಿ ಆದ ಕಾಲ್ತುಳಿತ ಘಟನೆಯನ್ನು ವಿಷಯವನ್ನಾಗಿಟ್ಟುಕೊಂಡು ವಿರೋಧ ಪಕ್ಷಗಳು ಯುಪಿ ಸಿಎಂ ಯೋಗಿ ಆದಿತ್ಯನಾಥ್ ಅವರ ಆಡಳಿತದ ಬಗ್ಗೆ ವ್ಯಂಗ್ಯವನ್ನಾಡಿತ್ತು. ಇದೀಗ ಕರ್ನಾಟಕ ರಾಜ್ಯ ಸರ್ಕಾರದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ದಂಪತಿ ಮಹಾಕುಂಭಮೇಳಕ್ಕೆ ಭೇಟಿ ನೀಡಿದ್ದಾರೆ.
ಕುಂಭಮೇಳದ ಭಕ್ತಿಭಾವದಲ್ಲಿ ಮಿಂದೆದ್ದ ಡಿಕೆಶಿ ದಂಪತಿ..!!
ಡಿ.ಕೆ ಶಿವಕುಮಾರ್ ಅವರು ಪತ್ನಿ ಉಷಾ ಅವರ ಜೊತೆ ಕುಂಭಮೇಳದಲ್ಲಿ ಭಾಗವಹಿಸಿದ್ದಾರೆ. ಉತ್ತರ ಪ್ರದೇಶ ಕೈಗಾರಿಕಾ ಸಚಿವ ನಂದಗೋಪಾಲ ಗುಪ್ತಾ ಅವರು ಡಿಕೆಶಿ ದಂಪತಿಗೆ ಭವ್ಯ ಸ್ವಾಗತ ಕೋರಿದ್ದಾರೆ. ತ್ರಿವೇಣಿ ಸಂಗಮದಲ್ಲಿ ಡಿಕೆಶಿ ದಂಪತಿ ಪುಣ್ಯಸ್ನಾನ ಮಾಡಿ ಬಳಿಕ ನೊಣವಿಕೆರೆ ಅಜ್ಜಯ್ಯ ಆಶೀರ್ವಾದ ಪಡೆದರು. ಇದೇ ವೇಳೆ ಕುಂಭಮೇಳದಲ್ಲಿದ್ದ ಸಾಧು-ಸಂತರ ಆಶೀರ್ವಾದವನ್ನು ಡಿಕೆಶಿ ಪಡೆದುಕೊಂಡು ಪುನೀತರಾದರು. ಅಧ್ಯಾತ್ಮದ ಕುರಿತು ಸಂತರೊಟ್ಟಿಗೆ ಆರೋಗ್ಯಕರ ಚರ್ಚೆ ನಡೆಸಿದರು.
ಕುಂಭಮೇಳದಲ್ಲಿ ಭಾಗವಹಿಸಿದ್ದ ಡಿಕೆಶಿ ಪುತ್ರಿ ಐಶ್ವರ್ಯಾ..!
ನೂರ ನಲ್ವತ್ತ ನಾಲ್ಕು ವರ್ಷಗಳ ಬಳಿಕ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಕಾಂಗ್ರೆಸ್ ನ ಸಕ್ರಿಯ ರಾಜಕಾರಣಿ ಡಿಕೆ ಶಿವಕುಮಾರ್ ಅವರು ಭಾಗಿಯಾಗಿರುವುದು ಬಿಜೆಪಿಗರಿಗೆ ನಿಜಕ್ಕೂ ಶಾಕ್ ಆಗಿದೆ. ಡಿಕೆಶಿ ದಂಪತಿ ಇಂದು ಮತ್ತು ನಾಳೆ ಕುಂಭಮೇಳದಲ್ಲಿ ಪಾಲ್ಗೊಳ್ಳಲಿದ್ದಾರೆ. ಇವರು ಭೇಟಿ ನೀಡುವ ಮೊದಲೇ ಇವರ ಪುತ್ರಿ ಐಶ್ವರ್ಯಾ ಮಹಾಕುಂಭಮೇಳಕ್ಕೆ ಭೇಟಿ ನೀಡಿ ಪುಣ್ಯಸ್ನಾನ ಮಾಡಿ ಸಾಧು ಸಂತರ ಆಶೀರ್ವಾದವನ್ನು ಪಡೆದು ಧನ್ಯರಾಗಿದ್ದಾರೆ.