ಆಟವಾಡ್ತಿದ್ದಾಗ ನಡೆಯಿತು ದುರಂತ..! ಬಾಲಕನ ಎದೆಯೊಳಗಿದ್ದ ತೆಂಗಿನ ಗರಿ ಹೊರತೆಗೆದ ವೆನ್ಲಾಕ್ ವೈದ್ಯರು..!

  • 12 Feb 2025 12:27:51 PM

ಮಕ್ಕಳು ಅವರ ಪಾಲಿಗೆ ಆಟವಾಡುತ್ತಿದ್ದಾರೆ ಎಂದು ಹೇಳಿ ಅವರ ಬಗ್ಗೆ ಗಮನಹರಿಸದೆ ಇದ್ದರೆ ಅಪಾಯ ಕಟ್ಟಿಟ್ಟ ಬುತ್ತಿ. ಅದು ಯಾವಾಗ ಹೇಗಾಗುತ್ತೆ ಎಂದು ಹೇಳಲು ಅಸಾಧ್ಯ. ತನ್ನ ಮಕ್ಕಳ ಪ್ರತೀ ವಿಚಾರದಲ್ಲೂ ಸೂಕ್ಷ್ಮತೆಯಿಂದ ಗಮನಹರಿಸೋದು, ದುರಂತ ಸಂಭವಿಸದಂತೆ ನೋಡಿಕೊಳ್ಳೋದು ಪೋಷಕರ ಜವಾಬ್ದಾರಿ. ಇಲ್ಲೊಂದು ಅಚ್ಚರಿಯ ಘಟನೆ ನಡೆದಿದ್ದು ಇದೀಗ ಮಂಗಳೂರಿನ ವೈದ್ಯರು ಬಾಲಕನ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ಮಾಡಿದ್ದಾರೆ.

 

ಬಾಲಕನ ಎದೆಯೊಳಗಿತ್ತು ತೆಂಗಿನ ಗರಿಯ ತುಂಡು, ಬಂಗಾರದ ಚೈನ್..!

 

ಅಸ್ಸಾಂ ಮೂಲದ ಹನ್ನೆರಡು ವರ್ಷದ ಬಾಲಕ ಕಮಲ್ ಹಸನ್ ಪ್ರಾಣಾಪಾಯದಿಂದ ಬಚಾವಾಗಿದ್ದಾನೆ. ಕೊಡಗಿನ ಕಾಫಿ ಎಸ್ಟೇಟ್ ಒಂದರಲ್ಲಿ ಬಾಲಕ ಕಮಲ್ ಹಸನ್ ಹೆತ್ತವರು ಕೂಲಿ ಕೆಲಸ ಮಾಡ್ತಿದ್ದರು. ಬಾಲಕ ಅಲ್ಲೇ ಆಟವಾಡುತ್ತಿದ್ದಾಗ ಕತ್ತರಿಸಲ್ಪಟ್ಟ ತೆಂಗಿನ ಗರಿಯ ಮೇಲೆ ಬಿದ್ದಿದ್ದಾನೆ. ಆ ರಭಸಕ್ಕೆ ತೆಂಗಿನ ಗರಿಯ ತುಂಡು ಮತ್ತು ಆತನ ಕುತ್ತಿಗೆಯಲ್ಲಿದ್ದ ಚೈನ್ ಎದೆಯ ಒಳಗಡೆ ಹೊಕ್ಕಿತ್ತು. ಪರಿಸ್ಥಿತಿ ಗಂಭೀರವಾಗಿತ್ತು. ವೆನ್ಲಾಕ್ ಆಸ್ಪತ್ರೆಗೆ ಮಧ್ಯರಾತ್ರಿ ದಾಖಲಿಸಲಾಗಿತ್ತು. 

 

ಎರಡು ಗಂಟೆ ನಡೆದ ಆಪರೇಷನ್ ಸಕ್ಸಸ್...!!

 

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ವೆನ್ಲಾಕ್ ನ ತಜ್ಞ ವೈದ್ಯರಾದ ಡಾ. ಸುರೇಶ್ ಪೈ ನೇತೃತ್ವದ ತಂಡ ಇದನ್ನು ಚಾಲೆಂಜ್ ಆಗಿ ಸ್ವೀಕರಿಜಸಿ ಸುಮಾರು ಎರಡು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಬಾಲಕನ ಕುತ್ತಿಗೆಯಿಂದ ಕೆಳಭಾಗಕ್ಕೆ ಇಳಿದಿದ್ದ ತೆಂಗಿನ ಗರಿಯನ್ನು ಮತ್ತು ಸ್ಟೀಲ್ ಚೈನ್ ಅನ್ನು ಹೊರತೆಗೆದಿದ್ದಾರೆ. ಸದ್ಯ ಬಾಲಕ ಚೇತರಿಸಿಕೊಳ್ಳುತ್ತಿದ್ದು ಅಪಾಯದಿಂದ ಪಾರಾಗಿದ್ದಾನೆ.