ದೆಹಲಿ: ಇದೀಗ ಬಿಜೆಪಿ ರೆಕಾರ್ಡನ್ನೇ ಬ್ರೇಕ್ ಮಾಡಿದೆ. ಅನೇಕ ವರ್ಷಗಳ ನಂತರ ಆಮ್ ಆದ್ಮಿ ಪಾರ್ಟಿಯನ್ನು ಹಿಂದಿಕ್ಕಿ ಇದೀಗ ಅಧಿಕಾರದ ಗದ್ದುಗೆಯೇರಲು ಅಣಿಯಾಗಿದೆ. ದೆಹಲಿ ವಿಧಾನಸಭಾ ಚುನಾವಣೆಯಲ್ಲಿ 70 ಸ್ಥಾನಗಳಲ್ಲಿ 48 ಸ್ಥಾನಗಳನ್ನು ಗೆದ್ದಿರುವ ಬಿಜೆಪಿ ಇದೀಗ ಸಿಎಂ ಹುದ್ದೆಗೆ ಮಹಿಳಾ ಅಭ್ಯರ್ಥಿಯನ್ನು ಆಯ್ಕೆ ಮಾಡುವುದರ ಬಗ್ಗೆ ಗಂಭೀರವಾಗಿ ಚಿಂತನ ಮಂಥನ ನಡೆಸುತ್ತಿದೆ.
ಬಿಜೆಪಿಯ ಪಟ್ಟಿಯಲ್ಲಿದೆ ಈ ಮಹಿಳೆಯರ ಹೆಸರು...!!
ಮೂಲಗಳು ಸೂಚಿಸುವಂತೆ, ಬಿಜೆಪಿಯ ಪಟ್ಟಿಯಲ್ಲಿರುವ ಹೆಸರುಗಳಲ್ಲಿ ದೆಹಲಿಯ ಮೊದಲ ಮುಖ್ಯಮಂತ್ರಿ ಮತ್ತು ಮಾಜಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಪುತ್ರಿ ಬಾನ್ಸುರಿ ಸ್ವರಾಜ್ ಕೂಡ ಕೇಳಿಬರುತ್ತಿದೆ. ಹಾಗೇ, ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ನಾಲ್ಕು ಮಹಿಳಾ ಅಭ್ಯರ್ಥಿಗಳು ಗೆಲ್ಲುವಲ್ಲಿ ಯಶಸ್ವಿಯಾಗಿದ್ದಾರೆ. ರಾಷ್ಟ್ರ ರಾಜಧಾನಿಯಲ್ಲಿ ಆಮ್ ಆದ್ಮಿ ಪಕ್ಷದ (ಎಎಪಿ) ಪ್ರಾಬಲ್ಯವನ್ನು ಕೊನೆಗೊಳಿಸಿದ ನಿರ್ಣಾಯಕ ಚುನಾವಣೆಯಲ್ಲಿ ರೇಖಾ ಗುಪ್ತಾ, ಶಿಖಾ ರಾಯ್, ಪೂನಂ ಶರ್ಮಾ ಮತ್ತು ನೀಲಂ ಪಹೇಲ್ವಾನ್ ವಿಜಯಭೇರಿ ಬಾರಿಸಿದ್ದಾರೆ. ಹೀಗಾಗಿ, ಈ ನಾಲ್ವರಲ್ಲಿ ಒಬ್ಬರು ಮಹಿಳೆ ಸಿಎಂ ಆಗುವ ಸಾಧ್ಯತೆಗಳನ್ನೂ ತಳ್ಳಿ ಹಾಕುವಂತಿಲ್ಲ. ಹಾಗೇ, ಮಾಜಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೆಸರು ಕೂಡ ಈ ಪಟ್ಟಿಯಲ್ಲಿ ಕೇಳಿಬರುತ್ತಿದೆ.
ಇಪ್ಪತ್ತೇಳು ವರ್ಷಗಳ ಬಳಿಕ ಕಮಲ ಪಡೆಯ ಅಧಿಪತ್ಯ...!!
70 ಸ್ಥಾನಗಳಲ್ಲಿ 48 ಸ್ಥಾನಗಳನ್ನು ತನ್ನದಾಗಿಸಿಕೊಂಡಿರುವ ಬಿಜೆಪಿ, ದೆಹಲಿಯಲ್ಲಿ ಅಧಿಕಾರಕ್ಕೆ ಮರಳಲು 27 ವರ್ಷಗಳ ಕಾಲ ಕಾಯಬೇಕಾಯಿತು. ಈ ಬಾರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಕೇವಲ 22 ಸ್ಥಾನಗಳನ್ನು ಪಡೆದಿದೆ. ಆದ್ದರಿಂದ ದೀರ್ಘವಾಗಿ ಸಮಾಲೋಚಿಸಿ ನೂತನ ಸಚಿವ ಸಂಪುಟವನ್ನು ರಚಿಸಬೇಕಾಗಿದೆ. ಈ ಬಾರಿ ಸಂಪುಟದಲ್ಲಿ ಮಹಿಳೆಯರಿಗೆ ಮತ್ತು ದಲಿತ ನಾಯಕರಿಗೆ ಮೊದಲ ಪ್ರಾಶಸ್ತ್ಯ ನೀಡಲಾಗುವುದು ಎಂಬುವುದರ ಬಗ್ಗೆ ಕೂಡಾ ಚರ್ಚೆ ನಡೆಯುತ್ತಿದೆ.