ಸುರತ್ಕಲ್ : ಹೊನ್ನಕಟ್ಟೆ ಜಂಕ್ಷನ್‌ನಲ್ಲಿ ನಿನ್ನೆ ರಾತ್ರಿ ನಿಲ್ಲಿಸಿದ್ದ ಟ್ಯಾಂಕರ್ ಏಕಾಏಕಿ ಚಲಿಸಿದ್ದು ಹೋಟೆಲ್ ಹಾಗೂ ಹಲವು ವಾಹನಗಳಿಗೆ ಢಿಕ್ಕಿ ಹೊಡೆದು ಭಾರೀ ಅಪಘಾತ ನಡೆದಿದೆ. ಅದೃಷ್ಟವಶಾತ್, ಈ ದುರ್ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಟ್ಯಾಂಕರ್ ಚಾಲಕ ಚಾಲನೆಯನ್ನು ನಿಲ್ಲಿಸಿ ಹೋಟೆಲ್‌ಗೆ ತೆರಳಿದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಕುಳಾಯಿಗುಡ್ಡೆಗೆ ಹೋಗುವ ರಸ್ತೆಯಲ್ಲಿ ನಿಲ್ಲಿಸಿದ್ದ ಟ್ಯಾಂಕರ್ ನಿಯಂತ್ರಣ ತಪ್ಪಿ ಇಳಿಜಾರಿನಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ದಾಟಿ ಹೋಗಿ ಹೋಟೆಲ್‌ಗೆ ಗುದ್ದಿದೆ.
ಅದಲ್ಲದೆ, ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ಕಾರು, ಆಟೋ ಮತ್ತು ದ್ವಿಚಕ್ರ ವಾಹನಗಳಿಗೂ ಡಿಕ್ಕಿ ಹೊಡೆದು ಗಂಭೀರ ಹಾನಿ ಉಂಟಾಗಿದೆ. ಅಪಘಾತದ ಭೀಕರ ದೃಶ್ಯವು ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.
ಘಟನಾ ಸ್ಥಳಕ್ಕೆ ಮಂಗಳೂರು ಉತ್ತರ ಠಾಣಾ ಪೊಲೀಸರು ಭೇಟಿ ನೀಡಿ ಅಪಘಾತಕ್ಕೆ ನಿಖರ ಕಾರಣವೇನೆಂದು ಪರಿಶೀಲನೆ ನಡೆಸಿದ್ದಾರೆ.