ಉತ್ತರ ಪ್ರದೇಶ: ಈಗಿನ ಆಧುನಿಕ ಕಾಲದಲ್ಲಿ ಶಾಲಾ- ಕಾಲೇಜಿಗೆ ಹೋಗುವ ಮಕ್ಕಳು ಪರೀಕ್ಷೆ ಪಾಸಾಗುವುದನ್ನೇ ಜೀವನದ ಬಹುದೊಡ್ಡ ಸವಾಲು ಎಂದು ಅಂದುಕೊಂಡಿರುತ್ತಾರೆ. ಅವರ ಮನಸ್ಸು ಅತ್ಯಂತ ಸೂಕ್ಷ್ಮವಾಗಿದ್ದು ಇತ್ತೀಚಿನ ದಿನಗಳಲ್ಲಿ ಧೈರ್ಯ, ಆತ್ಮವಿಶ್ವಾಸ ಅನ್ನೋದು ಅವರಲ್ಲಿ ಕುಸಿಯುತ್ತಿದೆ. ಮನಸ್ಸು ದುರ್ಬಲವಾಗಿ, ಆತ್ಮಸ್ಥೈರ್ಯ ಕಳೆದುಕೊಂಡು ಜೀವನದಲ್ಲಿ ತಪ್ಪು ದಾರಿ ಹಿಡಿಯುತ್ತಾರೆ. ಇಲ್ಲಿಯೂ ಕೂಡಾ ಅಂತಹುದೇ ದಾರುಣ ಘಟನೆಯೊಂದು ನಡೆದಿದೆ.
ಪರೀಕ್ಷೆಯಲ್ಲಿ ಫೇಲ್ ಆಗಿದಕ್ಕೆ ಜೀವಾಂತ್ಯಗೊಳಿಸಿದ ವಿದ್ಯಾರ್ಥಿನಿ..!
ಎಕ್ಸಾಂನಲ್ಲಿ ಫೇಲ್ ಆಗಿದಕ್ಕೆ ಇಂಜಿನಿಯರಿಂಗ್ ವಿದ್ಯಾರ್ಥಿನಿಯೋರ್ವಳು ಹೆತ್ತವರಿಗೆ ಕ್ಷಮಾಪಣಾ ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಉತ್ತರಪ್ರದೇಶದ ಗೋರಖ್ ಪುರದಲ್ಲಿ ನಡೆದಿದೆ. ಅದಿತಿ ಸಾವನ್ನಪ್ಪಿದ ವಿದ್ಯಾರ್ಥಿನಿಯಾಗಿದ್ದಾಳೆ. ಆಕೆ ಈ ದುಡುಕಿನ ನಿರ್ಧಾರ ತೆಗೆದುಕೊಳ್ಳುವ ಒಂದು ದಿನ ಮೊದಲು ಜೆಇಇ ಫಲಿತಾಂಶಗಳು ಪ್ರಕಟವಾಗಿದ್ದು ಅದಿತಿ ಅನುತ್ತೀರ್ಣವಾಗಿದ್ದು ಅದನ್ನು ಸಹಿಸಲಾಗದೆ ಈ ತಪ್ಪು ನಿರ್ಧಾರವನ್ನು ತೆಗೆದುಕೊಂಡಿದ್ದಾಳೆ.
ಅದಿತಿ ಡೆತ್ ನೋಟ್ ನಲ್ಲಿ ಏನು ಬರೆದಿದ್ದಳು ಗೊತ್ತಾ...?
ಅಮ್ಮ, ಅಪ್ಪ ಕ್ಷಮಿಸಿ, ನನ್ನಿಂದ ಆಗಲಿಲ್ಲ. ಇದು ನಮ್ಮ ಸಂಬಂಧದ ಅಂತ್ಯವಾಗಿತ್ತು. ನೀವು ಅಳಬೇಡಿ. ನೀವು ನನಗೆ ತುಂಬಾ ಪ್ರೀತಿ ಕೊಟ್ಟಿದ್ದೀರಿ. ನಾನು ನಿಮ್ಮ ಕನಸುಗಳನ್ನು ಈಡೇರಿಸಲು ಸಾಧ್ಯವಿಲ್ಲ. ನೀವು ದಯವಿಟ್ಟು ಚೋಟಿಯನ್ನು ನೋಡಿಕೊಳ್ಳಿ.
ಅವಳು ಖಂಡಿತ ನಿಮ್ಮ ಆಸೆಯನ್ನು ಈಡೇರಿಸುತ್ತಾಳೆ. ನಿಮ್ಮ ಪ್ರೀತಿಯ ಮಗಳು ಅದಿತಿ ಎಂದು ಡೆತ್ ನೋಟ್ ನಲ್ಲಿ ಕ್ಷಮೆಯಾಚಿಸಿ ಪತ್ರ ಬರೆದಿದ್ದಳು. ಈಕೆ ಎರಡು ವರ್ಷಗಳಿಂದ ಜೆಇಇಗೆ ತಯಾರಿ ನಡೆಸುತ್ತಿದ್ದಳು. ಪರೀಕ್ಷೆಯಲ್ಲಿ ಫೇಲ್ ಆದ ಕಾರಣ ಇಂತಹ ನಿರ್ಧಾರವನ್ನು ತೆಗೆದುಕೊಂಡಿದ್ದಾಳೆ.