ಕಾಪು: ಕಾಪು ಬೀಚ್‌ನಲ್ಲಿ ಮಧ್ಯರಾತ್ರಿ ಐದು ಮಂದಿ ಕಿಡಿಗೇಡಿಗಳು ಕುಡಿದ ಮತ್ತಿನಲ್ಲಿ ಅಂಗಡಿಗಳಿಗೆ ಹಾನಿಯನ್ನುಂಟು ಮಾಡಿರುವ ಘಟನೆ ನಡೆದಿದೆ. ಅಂಗಡಿ ಮುಂಭಾಗದಲ್ಲಿ ಇದ್ದ ವಸ್ತುಗಳನ್ನು ಒಡೆದುಹಾಕಿದ್ದಲ್ಲದೆ ರಸ್ತೆ ಬದಿಯಲ್ಲಿದ್ದ ಕಲ್ಲುಗಳನ್ನು ಎಸೆದು ಗಾಜುಗಳನ್ನು ಪುಡಿ ಮಾಡಿದ್ದಾರೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಈ ಘಟನೆ ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಘಟನೆಯಿಂದ ಅನೇಕ ಅಂಗಡಿಗಳ ಮಾಲೀಕರು ನಷ್ಟ ಅನುಭವಿಸಿದ್ದು, ತನ್ನ ಅಂಗಡಿಗೆ ಗಂಭೀರ ಹಾನಿಯಾಗಿರುವುದಾಗಿ ಕೆಲವರು ದೂರು ನೀಡಿದ್ದಾರೆ. ಆರೋಪಿಗಳ ಹಠಾತ್ ವರ್ತನೆಯಿಂದ ತಕ್ಷಣವೇ ಅಲ್ಲಿದ್ದ ಜನರು ಭಯಭೀತರಾಗಿದ್ದರು.
ಅಂಗಡಿ ಮಾಲೀಕರು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಈ ಸಂಬಂಧ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ತನಿಖೆ ಆರಂಭಿಸಿದ್ದು, ಆರೋಪಿಗಳನ್ನು ಶೀಘ್ರದಲ್ಲಿಯೇ ಪತ್ತೆ ಹಚ್ಚುವ ಭರವಸೆಯನ್ನು ನೀಡಿದ್ದಾರೆ.