ಆನೇಕಲ್ : ಇತ್ತೀಚೆಗೆ ಮನುಷ್ಯರಲ್ಲಿ ಮಾನವೀಯತೆ ಅನ್ನುವಂತದ್ದು ಕಡಿಮೆಯಾಗಿಬಿಟ್ಟಿದೆ. ಪಶುಗಳಿಗಿಂತಲೂ ಕೀಳಾಗಿ ವರ್ತಿಸುತ್ತಿದ್ದಾರೆ. ಪ್ರತಿನಿತ್ಯ ಹಲ್ಲೆ, ಮನೆಯಲ್ಲೇ ಕೊಲೆ, ಕೋಡಿ ಹರಿಯುವ ರಕ್ತ, ಆತುರ, ಒತ್ತಡ ಅಬ್ಬಾ ಇಂತಹ ಕ್ರೂರ ಬದುಕಲ್ಲೇ ಇಂದು ಸಮಾಜ ಮುಂದುವರೆಯುತ್ತಿದೆ. ಇದೀಗ ಅಂತಹುದೇ ಘಟನೆಯೊಂದು ಆನೆಕಲ್ ನಲ್ಲಿ ನಡೆದಿದೆ.
ಕಟ್ಟಡದ ಮೇಲಿಂದ ತಳ್ಳಿ ಪತ್ನಿಯನ್ನು ಕೊಂದ ಪಾಪಿ..!!
ನಿರ್ಮಾಣ ಹಂತದ ಕಟ್ಟಡ ಮೇಲಿಂದ ಪತ್ನಿಯನ್ನು ದೂಡಿ ಹತ್ಯೆಗೈದಿರುವ ಘಟನೆ ಆನೇಕಲ್ ತಾಲೂಕಿನ ಸರ್ಜಾಪುರದ ತಿಗಳ ಚೌಡದೇನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮಂಜುಳಾ ಮೃತ ದುರ್ದೈವಿ. ಮಂಜುನಾಥ್ ದುಷ್ಕೃತ್ಯವೆಸಗಿದ ಆರೋಪಿ. ಪತ್ನಿ ಮಾನಸಿಕ ಅಸ್ವಸ್ಥೆಯಾಗಿದ್ದ ಕಾರಣ ಪತಿ ಮಂಜುನಾಥ ಮಾನಸಿಕ ಖಿನ್ನತೆಗೆ ಒಳಗಾಗಿದ್ದ. ಆದ್ದರಿಂದ ಈ ಕೃತ್ಯವೆಸಗಿದ್ದಾನೆ ಎಂದು ತಿಳಿದುಬಂದಿದೆ.
ಗಂಡ ಹೆಂಡತಿಗೆ ಮಾಡಿದ್ದೇನು..?
ಶನಿವಾರ ರಾತ್ರಿ ಮಂಜುನಾಥ್ ಹೆಂಡತಿಯನ್ನು ಕೊಲ್ಲುವ ಪ್ಲ್ಯಾನ್ ಮಾಡಿದ್ದಾನೆ. ಆಕೆಯನ್ನು ಭುಜದ ಮೇಲೆ ಎತ್ತಿಕೊಂಡು, ನಿರ್ಮಾಣ ಹಂತದ ಕಟ್ಟಡದ ಎರಡನೇ ಮಹಡಿಗೆ ಕರೆದುಕೊಂಡು ಹೋಗಿದ್ದಾನೆ. ಬಳಿಕ ಅಲ್ಲಿಂದ ಕೆಳಗೆ ದೂಡಿದ್ದಾನೆ. ಕೆಳಗೆ ಬೀಳುತ್ತಿದ್ದಂತೆ ತಲೆಗೆ ಗಂಭೀರ ಗಾಯವಾಗಿದ್ದು, ಕೂಡಲೇ ಮಂಜುಳಾ ಅವರನ್ನು ಸ್ಥಳೀಯರು ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಕೆಳಗೆ ದೂಡಿರುವ ಭಯಾನಕ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸರ್ಜಾಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.