ಸಾಲದ ಕಂತು ಕಟ್ಟಿಲ್ಲವೆಂದು ಕಿವಿಯೋಲೆಯನ್ನೇ ಕಿತ್ತು ಹಲ್ಲೆ ನಡೆಸಿದ ಬ್ಯಾಂಕ್ ಸಿಬ್ಬಂದಿ...!!

  • 18 Feb 2025 12:25:17 PM

ತೀರ್ಥಹಳ್ಳಿ: ಜೀವನದಲ್ಲಿ ಒಂದು ಹೊತ್ತು ಊಟವಿಲ್ಲದೆ ದಿನ ಕಳೆಯಬಹುದು.‌ ಆದರೆ ಬ್ಯಾಂಕಿನಲ್ಲಿ ಅಥವಾ ಬೇರೆಲ್ಲೋ ತೆಗೆದ ಸಾಲವನ್ನು ಹಿಂತಿರುಗಿಸದೆ ಸಮಾಧಾನ ಇರೋದಿಲ್ಲ. ಬ್ಯಾಂಕಿನಿಂದ ಸಾಲ ತೆಗೆದಿದ್ರೆ ಕಥೆ ಮುಗೀತು ಬಿಡಿ. ಅದನ್ನು ಕಟ್ಟುವವರೆಗೂ ನಮ್ಮನ್ನು ಟಾರ್ಚರ್ ಕೊಟ್ಟು ಹಿಂಡಿ ಸಿಪ್ಪೆ ಮಾಡಿ ಬಿಡುತ್ತಾರೆ. ಇಲ್ಲೊಬ್ಬ ಮಹಿಳೆ ಸಾಲ ಕಟ್ಟಿಲ್ಲವೆಂದು ಬ್ಯಾಂಕ್ ನವರು ಏನು ಮಾಡಿದ್ದಾರೆ ಗೊತ್ತಾ..?

 

ಸಾಲ ಕಟ್ಟಿಲ್ಲವೆಂದು ಕಿವಿಯೋಲೆಯನ್ನೇ ಕಿತ್ತ ಬ್ಯಾಂಕ್ ಸಿಬ್ಬಂದಿ...!

 

ಸಾಲದ ಕಂತು ಕಟ್ಟಿಲ್ಲವೆಂಬ ಕಾರಣಕ್ಕೆ ಬ್ಯಾಂಕ್ ಸಿಬ್ಬಂದಿ ಸ್ವಾತಂತ್ರ್ಯ ಹೋರಾಟಗಾರರೊಬ್ಬರ ಪತ್ನಿಯ ಕಿವಿಯೋಲೆಯನ್ನೇ ಕಿತ್ತೆಸೆದು ಹಲ್ಲೆ ನಡೆಸಿದ ಅಮಾನವೀಯ ಘಟನೆ ತೀರ್ಥಹಳ್ಳಿಯ ಕೋಣಂದೂರಿನಲ್ಲಿ ನಡೆದಿದೆ. ಬಿಲ್ಲೇಶ್ವರ ಗ್ರಾಮದ ಮಾಜಿ ಸ್ವಾತಂತ್ರ್ಯ ಹೋರಾಟಗಾರ ಚೆನ್ನವೀರಪ್ಪ ಅವರ ಪತ್ನಿ ಹಾಲಮ್ಮ ಅವರಿಗೆ ನಾಲ್ಕೈದು ತಿಂಗಳಿಂದ ಪಿಂಚಣಿ ಹಣ ಬಂದಿರಲಿಲ್ಲ. ಈ ನಡುವೆ ಮನೆ ದುರಸ್ತಿಗೆಂದು ತೆಗೆದಿದ್ದ ಸಾಲ ಕಟ್ಟಲು ಕೂಡಾ ಅಸಾಧ್ಯವಾಯಿತು. ಯಾಕೆಂದರೆ ಇವರು ಪಿಂಚಣಿ ಹಣವನ್ನೇ ನಂಬಿ ಜೀವನ ನಡೆಸುತ್ತಿರುವವರು. ಇದ್ಯಾವುದನ್ನೂ ಅರ್ಥೈಸಿಕೊಳ್ಳದೆ ಬ್ಯಾಂಕ್ ಸಿಬ್ಬಂದಿ ವೃದ್ಧೆಯ ಜೊತೆಗೆ ಕ್ರೂರವಾಗಿ ವರ್ತಿಸಿದ್ದಾರೆ. ಈ ಬಗ್ಗೆ ವ್ಯಾಪಕ ಆಕ್ರೋಶ ಕೂಡಾ ವ್ಯಕ್ತವಾಗಿದೆ.

 

ಮನೆಯ ರೇಷನ್ ಗಾಗಿ ಓಲೆ ಅಡವಿಡಲು ಬಂದಿದ್ದ ವೃದ್ಧೆ...!! 

 

ಪಿಂಚಣಿ ಹಣವನ್ನೇ ಆಧಾರವಾಗಿ ನಂಬಿಕೊಂಡು ಜೀವನ ಮಾಡುತ್ತಿದ್ದರಿಂದ ಕಳೆದ ನಾಲ್ಕೈದು ತಿಂಗಳಿಂದ ಪಿಂಚಣಿ ಹಣ ಬರದೆ ಮಹಿಳೆ ಕಂಗಾಲಾಗಿದ್ದರು. ಮನೆಯ ರೇಷನ್ ಗಾಗಿ ಬೇರೆ ದಿಕ್ಕಿಲ್ಲದೆ ತನ್ನಲ್ಲಿದ್ದ ಓಲೆ, ಚೈನ್ ಅನ್ನು ಅಡವಿಡಲು ಬ್ಯಾಂಕ್ ಗೆ ಬಂದಿದ್ದರು.‌ ಆದರೆ ಸಿಬ್ಬಂದಿ ಒಡವೆ ಪಡೆದು ಹಣ ನೀಡದೆ ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿ ಹೊರದಬ್ಬಿದ್ದಾರೆ. ಈ ಬಗ್ಗೆ ವೃದ್ಧೆಯ ಮಗಳು ಶಕುಂತಲಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.