ದೇಗುಲದ ಉತ್ಸವದಲ್ಲಿ ರೊಚ್ಚಿಗೆದ್ದು ಓಡಿದ ಆನೆಗಳು..!! ಮೂವರ ಸಾವು, ಹಲವರಿಗೆ ಗಾಯ..!!

  • 18 Feb 2025 01:34:36 PM

ಕೋಝಿಕೋಡ್ : ಆನೆಗಳನ್ನು ಪಳಗಿಸುವುದರ ಕುರಿತು ನೀವು ಕೇಳಿರಬಹುದು. ಈ ಸಂದರ್ಭ ಜನರು, ಅದನ್ನು ನಿಯಂತ್ರಿಸುವ ಮಾವುತರು ಅತ್ಯಂತ ಜಾಗರೂಕತೆಯಿಂದ ಇರಬೇಕಾಗುತ್ತದೆ. ಕೆಲವೊಮ್ಮೆ ಮದವೇರಿ ಆನೆಗಳು ಸಿಕ್ಕ ಸಿಕ್ಕವರ ಮೇಲೆ ಆಕ್ರಮಣ ಮಾಡಿಬಿಡುತ್ತದೆ. ಇದೀಗ ದೇವಸ್ಥಾನದ ಉತ್ಸವದಲ್ಲಿ ಕೂಡಾ ಆನೆಗಳು ರಂಪರಾಮಾಯಣ ಮಾಡಿ ಜನರ ಸಾವಿಗೆ ಕಾರಣವಾಗಿರುವ ಅಚ್ಚರಿ ಮತ್ತು ದುರಂತ ಘಟನೆಯೊಂದು ನಡೆದಿದೆ. 

 

ಕೆರಳಿ ಕೆಂಡಾಮಂಡಲವಾಗಿ ಓಡಿದ ಆನೆಗಳು, ಮೂವರು ದಾರುಣ ಸಾವು..!

 

ದೇವಾಲಯದ ಉತ್ಸವ ಕಾರ್ಯಕ್ರಮಕ್ಕೆ ಆಗಮಿಸಿದ್ದ ಆನೆಗಳು ಇದ್ದಕಿದ್ದಂತೆ ರೊಚ್ಚಿಗೆದ್ದು ಓಡಲಾರಂಭಿಸಿದ್ದು ಕಾಲಿಗೆ ಸಿಕ್ಕವರನ್ನೂ ತುಳಿದು ಅಟ್ಟಹಾಸ ಮೆರೆದಿದೆ. ಇದರ ಪರಿಣಾಮ ಮೂರು ಜನ ದಾರುಣವಾಗಿ ಸಾವನ್ನಪ್ಪಿದ್ದು ಹಲವರು ಗಾಯಗೊಂಡಿರುವ ಘಟನೆ ಕೇರಳದ ಕೋಝಿಕ್ಕೋಡ್ ನ ಕೊಯಿಲಾಂಡಿಯಲ್ಲಿ ನಡೆದಿದೆ. ಇಲ್ಲಿಯ ಕುರುವಂಗಾಡ್ ನಲ್ಲಿರುವ ಮಣಕ್ಕುಳಂಗರ ದೇವಾಲಯದಲ್ಲಿ ಉತ್ಸವ ನಡೆಯುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಪರಿಣಾಮವಾಗಿ ಮೂವತ್ತಾರಕ್ಕೂ ಹೆಚ್ಚು ಜನ ಗಾಯಗೊಂಡು ಮೂವರು ಮೃತಪಟ್ಟಿದ್ದಾರೆ. 

 

ಭಕ್ತರ ಬಲಿ ತೆಗೆದುಕೊಂಡ ಆನೆಗಳ ಆಕ್ರೋಶ...!!

 

ಪೀತಾಂಬರನ್ ಮತ್ತು ಗೋಕುಲ್ ಎಂಬ ಎರಡು ಆನೆಗಳನ್ನು ಉತ್ಸವಕ್ಕೆ ಕರೆತಂದಿದ್ದರು. ಒಂದು ಆನೆ ಮತ್ತೊಂದು ಆನೆಯನ್ನು ಆಕ್ರಮಣಕಾರಿಯಾಗಿ ಕೆರಳಿಸಿದ್ದರಿಂದ ಅಲ್ಲಿ ಘರ್ಷಣೆ ಉಂಟಯಿತು. ಆನೆಗಳ ಕಾಲಡಿಗೆ ಸಿಕ್ಕಿ ಮೂವರು ಸಾವನ್ನಪ್ಪಿದರೆ ಹಲವಾರು ಜನ ಗಾಯಗೊಂಡಿದ್ದಾರೆ. ಪೊಲೀಸರು, ಭದ್ರತಾ ಸಿಬ್ಬಂದಿಗಳು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದಾರೆ.