ಮೈಸೂರು :ಇತ್ತೀಚಿನ ದಿನಗಳಲ್ಲಿ ಆತ್ಮಹತ್ಯೆ, ಸಾವು ಪ್ರಕರಣ ಹೆಚ್ಚಾಗುತ್ತಿದೆ. ಜೀವನದ ಜಂಜಾಟಗಳಿಗೆ ಒಗ್ಗಿಕೊಳ್ಳಲಾಗದೆ ತನ್ನ ಕುಟುಂಬಸ್ಥರ ನಿರ್ವಹಣೆಗೂ ಅಶಕ್ತರಾಗಿ ಅವರನ್ನು ಸಾಯಿಸಿ ಆತ್ಮಹತ್ಯೆಗೆ ಶರಣಾಗುವ ಅದೆಷ್ಟೋ ಮಂದಿ ಸಮಾಜದಲ್ಲಿ ಇದ್ದಾರೆ. ಆದರೆ ಸಮಸ್ಯೆಗಳಿಗೆ ಸಾವೊಂದೇ ಪರಿಹಾರವಲ್ಲ. ಆತ್ಮವಿಶ್ವಾಸ ಬಿಡದೆ ಪ್ರಯತ್ನಪಟ್ಟಲ್ಲಿ ದೇವರು ಒಂದಲ್ಲ ಒಂದು ಮಾರ್ಗವನ್ನು ಖಂಡಿತವಾಗಿಯೂ ನೀಡಿಯೇ ನೀಡುತ್ತಾರೆ. ಇದೀಗ ಮೈಸೂರಿನಲ್ಲೊಂದು ಹೃದಯವಿದ್ರಾವಕ ಘಟನೆ ನಡೆದಿದೆ.
ಅಪಾರ್ಟ್ಮೆಂಟ್ ನಲ್ಲಿ ಒಂದೇ ಕುಟುಂಬದ ನಾಲ್ವರ ದುರಂತ ಅಂತ್ಯ...!!
ಮೈಸೂರಿನ ವಿಶ್ವೇಶ್ವರಯ್ಯ ನಗರದ ಅಪಾರ್ಟ್ಮೆಂಟ್ ಒಂದರಲ್ಲಿ ಬಾಲಕ ಸೇರಿದಂತೆ ಒಂದೇ ಕುಟುಂಬದ ನಾಲ್ಕು ಜನ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ನಡೆದಿದೆ. ಪ್ರಿಯಂವದ, ಚೇತನ್, ರೂಪಾಲಿ, ಕುಶಾಲ್ ಮೃತ ದುರ್ದೈವಿಗಳು. ಅಪಾರ್ಟ್ಮೆಂಟ್ ನಲ್ಲೇ ಚೇತನ್ ಎಂಬವರು ತನ್ನ ತಾಯಿ, ಪತ್ನಿ ಹಾಗೂ ಮಗನಿಗೆ ವಿಷ ಉಣಿಸಿ ಕೊಲೆ ಮಾಡಿ ನಂತರ ತಾನೂ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಸ್ಥಳೀಯರು ಕೂಡಾ ಹೀಗೆ ಮಾತಾಡುತ್ತಿದ್ದಾರೆ. ಆದರೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ.
ಪೊಲೀಸರು ಈ ಬಗ್ಗೆ ಏನ್ ಹೇಳ್ತಾರೆ..?
ಘಟನೆ ನಡೆದ ಸ್ಥಳಕ್ಕೆ ಮೈಸೂರು ಪೊಲೀಸ್ ಕಮಿಷನರ್ ಸೇರಿದಂತೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚೇತನ್ ಕುಟುಂಬ ಮತ್ತು ಚೇತನ್ ತಾಯಿ ಅಕ್ಕಪಕ್ಕದ ಫ್ಲ್ಯಾಟ್ ನಲ್ಲಿ ವಾಸವಾಗಿದ್ದರು. ಎಲ್ಲರೂ ಒಟ್ಟಾಗಿ ಭಾನುವಾರ ಗೊರೂರಿಗೂ ಹೋಗಿ ಬಂದಿದ್ದರು. ಮೃತ ಚೇತನ್ ಮೂಲತಃ ಮೈಸೂರಿನ ಗೊರೂರಿನ ವಾಸಿಯಾಗಿದ್ದು ಕಾರ್ಮಿಕರನ್ನು ಸೌದಿಗೆ ಕಳುಹಿಸುವ ಏಜೆನ್ಸಿಯೊಂದನ್ನು ನಡೆಸುತ್ತಿದ್ದರು. ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.