ಪಡುಬಿದ್ರಿ|ರೈಲ್ವೇ ಹಳಿಯ ಲಾಕ್ ಕಿತ್ತ ಖತರ್ನಾಕ್ ಬಾಲಕರು..! ಆದರೆ ಅರೆಸ್ಟ್ ಆಗಿದ್ದು ಮಾತ್ರ ರೈಲ್ವೇ ಗ್ಯಾಂಗ್ ಮ್ಯಾನ್!

  • 18 Feb 2025 03:08:38 PM

ಪಡುಬಿದ್ರೆ :ರೈಲ್ವೇ ಹಳಿಯ ಬಳಿ ನಾವು ಎಷ್ಟು ಜಾಗರೂಕತೆಯಿಂದ ಇರುತ್ತೇವೋ ಅಷ್ಟು ಒಳ್ಳೆಯದು. ಏಕೆಂದರೆ ಅಲ್ಲಿ ಅವಘಡಗಳು ನಡೆಯುವುದು ಮಾಮೂಲಿ.‌ ಅದಕ್ಕೆ ಸುರಕ್ಷತೆಯ ದೃಷ್ಟಿಯಿಂದ ಅಲ್ಲಿ ಸಿಬ್ಬಂದಿಯನ್ನೂ ನೇಮಿಸಿರುತ್ತಾರೆ. ಇದೀಗ ದ.ಕ ಜಿಲ್ಲೆಯ ಪಡುಬಿದ್ರಿಯಲ್ಲಿ ರೈಲ್ವೇ ಹಳಿಯ ಬಳಿ ಅಪರೂಪದ ಘಟನೆಯೊಂದು ನಡೆದಿದೆ. 

 

ರೈಲ್ವೇ ಹಳಿಯ ಕಬ್ಬಿಣ ಹೆಕ್ಕಿದ ಅಪ್ರಾಪ್ತ ಬಾಲಕರು..!

 

ಅಪ್ರಾಪ್ತ ಬಾಲಕರಿಬ್ಬರು ರೈಲ್ವೇ ಹಳಿಯ ಕಬ್ಬಿಣ ಹೆಕ್ಕಿದರು ಎಂಬ ಕಾರಣಕ್ಕಾಗಿ ಅವರ ಮೇಲೆ ಹಲ್ಲೆ ನಡೆಸಿ ವೀಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡಿರುವ ಕೊಂಕಣ ರೈಲ್ವೇ ಗ್ಯಾಂಗ್ ಮ್ಯಾನ್ ವಿರುದ್ಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹಲ್ಲೆಗೊಳಗಾದ ಒಬ್ಬ ಬಾಲಕನ ತಂದೆ ಹೆಜಮಾಡಿಯ ಅಬ್ದುಲ್ ಖಾದರ್ ಅವರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಸಾರ್ವಜನಿಕ ಪ್ರದೇಶದಲ್ಲಿ ಬಾಲಕರ ಮೇಲೆ ಹಲ್ಲೆ ಮಾಡಿರುವುದು ಖಂಡನೀಯ ಎಂದು ಬಾಲಕರ ಮನೆಯವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 

ರೈಲ್ವೇ ಸಿಬ್ಬಂದಿ ವರ್ತನೆಗೆ ಮಿಶ್ರ ಪ್ರತಿಕ್ರಿಯೆ..!

 

ಪಲಿಮಾರು ಗ್ರಾಮದ ಅವರಾಲು ಮಟ್ಟು ಎಂಬಲ್ಲಿರುವ ಅಜ್ಜನ ಮನೆಗೆ ಬಾಲಕನೋರ್ವ ತನ್ನ ಗೆಳೆಯನೊಂದಿಗೆ ಹೋಗಿದ್ದನು. 

ಶನಿವಾರ ಮಧ್ಯಾಹ್ನದ ವೇಳೆ ಇವರಿಬ್ಬರು ಆಟವಾಡುತ್ತ ರೈಲ್ವೇ ಹಳಿಯ ಬಳಿ ದೊರೆತ ಕಬ್ಬಿಣದ ತುಂಡನ್ನು ಹೆಕ್ಕಿದ್ದರು. ಇದನ್ನು ಗಮನಿಸಿದ ಗ್ಯಾಂಗ್ ಮ್ಯಾನ್ ನೋಡಿ ಬಾಲಕರಿಬ್ಬರನ್ನು ಹಿಡಿದು ಕೋಲಿನಿಂದ ಹಲ್ಲೆ ನಡೆಸಿ ವೀಡಿಯೋ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಇದೀಗ ಬಾಲಕನ ಪೋಷಕರು ನೀಡಿದ ದೂರಿನ ಆಧಾರದಲ್ಲಿ ಇವರ ಮೇಲೆ ಕೇಸ್ ದಾಖಲಾಗಿದೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ ರೈಲ್ವೇ ಸಿಬ್ಬಂದಿ ಮಾಡಿದ್ದು ಉತ್ತಮ ಕಾರ್ಯ, ಇದರಿಂದ ಅವಘಡ ತಪ್ಪಿದೆ ಎಂದು ಕೂಡಾ ಕೆಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.