ಭೀಕರ ಕೊಲೆಯ ಬೆನ್ನತ್ತಿ ಹೋದ‌ ಪೊಲೀಸರಿಗೆ ಕಾದಿತ್ತು ಶಾಕ್!; ಪುಟ್ಟ ಬಾಲಕಿ ಬಿಡಿಸಿದ ಚಿತ್ರದಲ್ಲಿತ್ತು ಹತ್ಯೆಯ ಸಾಕ್ಷಿ!

  • 19 Feb 2025 03:57:41 PM


ಉತ್ತರಪ್ರದೇಶ: ಮಕ್ಕಳ ಎದುರಲ್ಲಿ ನಾವು ಏನೇ ಮಾತಾಡುವಾಗಲೂ, ಏನನ್ನೇ ಮಾಡುವಾಗಲೂ ಅತ್ಯಂತ ಜಾಗರೂಕರಾಗಿರಬೇಕು. ಏಕೆಂದರೆ ಮಕ್ಕಳು ಕ್ರಿಯೆಯನ್ನು ಅತ್ಯಂತ ಶೀಘ್ರವಾಗಿ ಫಾಲೋ ಮಾಡ್ತಾರಂತೆ.‌ ಈಗಿನ ಮಕ್ಕಳು ಅತ್ಯಂತ ಬೇಗ ಪ್ರಬುದ್ಧರಾಗಿ ಬಿಡ್ತಾರೆ. ಅವರಿಗೆ ಎಲ್ಲಾ ವಿಷಯಗಳು ಕೂಡಾ ಬೇಗನೆ ಅರ್ಥವಾಗಿ ಬಿಡುತ್ತದೆ. ಇದೀಗ ಮಗಳಿಂದಲೇ ತಾಯಿಯ ಕೊಲೆ ಸೀಕ್ರೆಟ್ ಬಯಲಾಗಿದೆ. 

 

ಮಗಳ ಡ್ರಾಯಿಂಗ್ ನಲ್ಲಿತ್ತು ತಾಯಿಯ ಕೊಲೆ ರಹಸ್ಯ...!!

 

ತನ್ನ ಪುಟ್ಟ ಮಗಳು ಬಿಡಿಸಿದ ಚಿತ್ರದಿಂದ ತಾಯಿಯ ಕೊಲೆ ರಹಸ್ಯ ಬಯಲಾಗಿರುವ ಅಪರೂಪದ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಅಪ್ಪನೇ ಅಮ್ಮನನ್ನು ಕೊಲೆ ಮಾಡಿದ್ದು ಎಂದು ಪೊಲೀಸರ ಮುಂದೆ 4 ವರ್ಷದ ಮಗಳು ಧೈರ್ಯವಾಗಿ ನಿಂತು ಸಾಕ್ಷಿ ಹೇಳಿದ್ದಾಳೆ.

 

ಉತ್ತರ ಪ್ರದೇಶದ ಶಿವ ಪರಿವಾರ್ ಕಾಲೋನಿಯ ಝಾನ್ಸಿ ಬಳಿಯ ಕೊಟ್ವಾಲಿ ಪ್ರದೇಶದಲ್ಲಿ ಇಪ್ಪತ್ತೇಳು ವರ್ಷದ ಮಹಿಳೆಯೋರ್ವಳು ಅನುಮಾನಸ್ಪದವಾಗಿ ಸಾವನ್ನಪ್ಪಿದ್ದು ಆತಂಕಕ್ಕೆ ಕಾರಣವಾಗಿತ್ತು. ಇದೀಗ ತಾಳಿ ಕಟ್ಟಿದ ಗಂಡನೇ ಆಕೆಯನ್ನು ಕೊಂದಿರುವುದಾಗಿ ಅವರ ಮಗಳು ಮಹತ್ವದ ಸಾಕ್ಷಿ ನೀಡಿ ಸಾಬೀತುಪಡಿಸಿದ್ದಾಳೆ. 

 

ವರದಕ್ಷಿಣೆ ರೂಪದಲ್ಲಿ ಕಾರು ನೀಡಿಲ್ಲವೆಂದು ನಡೆಯಿತು ಹತ್ಯೆ..!

 

2019ರಲ್ಲಿ ಝಾನ್ಸಿ ನಿವಾಸಿಯಾದ ಸಂದೀಪ್ ಬುದೋಲಿನನ್ನು ಮೃತ ಮಹಿಳೆ ವಿವಾಹವಾಗಿದ್ದರು. ಮದುವೆಯ ಸಂದರ್ಭದಲ್ಲಿ 20 ಲಕ್ಷ ರೂ. ಹಣ ಹಾಗೂ ಇನ್ನಿತರ ಉಡುಗೊರೆಗಳನ್ನು ವರದಕ್ಷಿಣೆ ರೂಪದಲ್ಲಿ ಸಂದೀಪ್‌ಗೆ ನೀಡಲಾಗಿತ್ತು. ಸಂದೀಪ್ ಹಾಗೂ ಆತನ ಕುಟುಂಬಸ್ಥರು ವರದಕ್ಷಿಣೆ ರೂಪದಲ್ಲಿ ಕಾರು ನೀಡುವಂತೆ ಒತ್ತಾಯಿಸುತ್ತಿದ್ದರು. ಅವರ ಬೇಡಿಕೆ ಈಡೇರಿಸದಿದ್ದಾಗ ದೈಹಿಕ ಹಾಗೂ ಮಾನಸಿಕ ಹಿಂಸೆ ನೀಡುತ್ತಿದ್ದರು.

 

ಗಂಡು ಮಗುವಿಗೆ ಜನ್ಮ ನೀಡಿಲ್ಲವೆಂದೂ ಚಿತ್ರಹಿಂಸೆ ನೀಡುತ್ತಿದ್ದರು. ಅವಳ ಪತಿ, ಅತ್ತೆ ಮತ್ತು ಮಾವ ಸೇರಿ ಈ ಕೃತ್ಯ ಎಸಗಿದ್ದಾರೆ ಎಂದು ಮೃತ ಮಹಿಳೆಯ ತಂದೆ ಸಂಜಯ್ ತ್ರಿಪಾಠಿ ದೂರಿದ್ದಾರೆ. ಆರೋಪಿಗಳಿಗಾಗಿ ಪೊಲೀಸರು ಶೋಧಕಾರ್ಯ ನಡೆಸುತ್ತಿದ್ದಾರೆ.