ಬಂಟ್ವಾಳ: ಹಣ ಕಂಡರೆ ಹೆಣವೂ ಬಾಯಿ ಬಿಡುತ್ತದೆ ಎಂಬ ನಾಣ್ಣುಡಿಯನ್ನು ಸುಮ್ಮನೆ ಹಿರಿಯರು ಹುಟ್ಟು ಹಾಕಿಲ್ಲ. ಇವತ್ತು ಪ್ರಪಂಚದಲ್ಲಿ ಪ್ರತಿಯೊಬ್ಬ ವ್ಯಕ್ತಿ ಅದೇನ್ ಕಷ್ಟ ಪಡುತ್ತಿದ್ದರೂ, ಅದೇನೇ ದುಷ್ಕೃತ್ಯಕ್ಕೆ ಕೈ ಹಾಕಿದ್ದರೂ ಅದು ಕೇವಲ ಹಣ ಗಳಿಸುವ ಉದ್ದೇಶಕ್ಕೆ ಮಾತ್ರ. ಹಣ ಇವತ್ತು ಮನುಷ್ಯನನ್ನು ಎಲ್ಲಾ ಮಾಡಿಸಿಬಿಡುತ್ತಿದೆ. ಇತ್ತೀಚೆಗಂತೂ ನಡೆಯುತ್ತಿರುವ ಒಂದಲ್ಲ ಒಂದು ಅಪರಾಧ ಪ್ರಕರಣಗಳ ಮೂಲ ಉದ್ದೇಶವೇ ಹಣ. ಇದೀಗ ಹಣಕ್ಕಾಗಿ ವಿಟ್ಲದಲ್ಲಿ ಅಪರೂಪದ ಘಟನೆಯೊಂದು ನಡೆದಿದೆ.
ದೈವ ನರ್ತಕನನ್ನೇ ಬೆದರಿಸಿ ಹಣ ಸುಲಿಗೆ...!
ದೈವ ನರ್ತಕನೋರ್ವನನ್ನು ಬೆದರಿಸಿ ಹಣ ವಸೂಲಿ ಮಾಡಿದ ಬಗ್ಗೆ ಇಬ್ಬರ ವಿರುದ್ಧ ಪ್ರಕರಣ ದಾಖಲಿಸುವಂತೆ ಬಂಟ್ವಾಳ ಕೋರ್ಟ್ ಖಡಕ್ ಆದೇಶವನ್ನು ನೀಡಿದೆ. ದಲಿತ ಸಂಘದ ಸ್ಥಾಪಕಾಧ್ಯಕ್ಷ ಸೇಸಪ್ಪ ಬೆದ್ರಕಾಡು ಮತ್ತು ವಿಟ್ಲದ ನೆಕ್ಕರೆಕಾಡು ನಿವಾಸಿ ಕಮಲ ಎಂಬವರ ವಿರುದ್ಧ ಇದೀಗ ಎಫ್ಐಆರ್ ದಾಖಲಾಗಿದೆ. ನಲಿಕೆ ಸಮುದಾಯಕ್ಕೆ ಸೇರಿದ ವಿಟ್ಲ ಸುರುಳಿಮೂಲೆ ನಿವಾಸಿ ಆನಂದ ಅವರು ತನಗಾದ ಅನ್ಯಾಯದ ವಿರುದ್ಧ ವಿಟ್ಲ ಠಾಣೆಗೆ ದೂರು ನೀಡಿದ್ದರು. ಆದರೆ ಪೊಲೀಸರು ಸರಿಯಾಗಿ ಸ್ಪಂದಿಸಲಿಲ್ಲ. ಆದ ಕಾರಣ ನ್ಯಾಯವಾದಿ ಶಿವಾನಂದ ವಿಟ್ಲ ಅವರ ಮೂಲಕ ಖಾಸಗಿ ದೂರು ದಾಖಲಿಸಿದ್ದರು.
ಇವರು ನೀಡಿದ ದೂರಿನಲ್ಲಿ ಏನಿದೆ..?
ಆನಂದರವರು ದೈವನರ್ತನದ ಜೊತೆಗೆ ನಾಟಿ ವೈದ್ಯ ಹಾಗೂ ಜ್ಯೋತಿಷಿ ವೃತ್ತಿಯನ್ನು ಕಳೆದ ಇಪ್ಪತ್ತು ವರ್ಷಗಳಿಂದ ಮಾಡುತ್ತಿದ್ದಾರೆ. ವಿವಾಹಿತ ಮಹಿಳೆ ಕಮಲ ಅವರು ತನ್ನ ಸಮಸ್ಯೆಗೆ ಪರಿಹಾರ ಕೇಳಲು ಆನಂದ ಅವರ ಬಳಿ ಬಂದಿದ್ದು ಅವರಿಗೆ ಪರಿಹಾರ ತಿಳಿಸಿ ಅದು ಮಾಡಲು ಹದಿನೈದು ಸಾವಿರ ಖರ್ಚಾಗುತ್ತದೆ ಎಂದು ತಿಳಿಸಿದ್ದರು.
ಪೂಜೆ ಮಾಡಿದ ನಂತರ ಆ ದಂಪತಿ ಒಂದು ತಿಂಗಳ ನಂತರ ಕೊಡ್ತೇವೆ ಎಂದವರು ಇಲ್ಲಿಯವರೆಗೆ ಕೊಟ್ಟಿರುವುದಿಲ್ಲ. ಹೀಗೆ ದಾರಿಯಲ್ಲಿ ಸಿಕ್ಕಾಗ ಹಣ ಕೇಳಿದಾಗ ಇನ್ಮುಂದೆ ಹಣ ಕೇಳಿದ್ರೆ ನಿನ್ನ ಮೇಲೆ ಅತ್ಯಾಚಾರ ಕೇಸ್ ದಾಖಲಿಸುತ್ತೇನೆ ಎಂದು ಬೆದರಿಸಿದ್ದು ಮಾತ್ರವಲ್ಲದೆ ಸೇಸಪ್ಪ ಅವರ ನೆರವಿನಲ್ಲಿ ಠಾಣೆಯಲ್ಲಿ ಆನಂದ ಅವರಿಂದ ಸುಳ್ಳು ಹೇಳಿಕೆಯನ್ನು ಬರೆಯಿಸಿಕೊಂಡು ಆನಂದ ಅವರ ಸಹಿ ಪಡೆದು ಹಣ ಕೇಳದಂತೆ ಬೆದರಿಸಿದ್ದಾರೆ.
ಅಷ್ಟೇ ಅಲ್ಲದೆ ಮಹಿಳೆ ಮತ್ತು ಸೇಸಪ್ಪ ಅವರು ಲಕ್ಷಕ್ಕೂ ಅಧಿಕ ಹಣಕ್ಕೆ ಆನಂದ ಅವರಲ್ಲಿ ಡಿಮ್ಯಾಂಡ್ ಇಟ್ಟು ಕೊಡದೇ ಇದ್ದಲ್ಲಿ ಅತ್ಯಾಚಾರ ಕೇಸ್ ಹಾಕಿ ಎಲ್ಲೂ ದೈವನರ್ತನ ಮಾಡದಂತೆ ಮತ್ತು ಊರಲ್ಲಿ ಮರ್ಯಾದೆ ಹೋಗುವಂತೆ ಮಾಡುತ್ತೇವೆ ಎಂದು ಅವಾಜ್ ಹಾಕಿದ್ದಾರೆ. ಹೆದರಿದ ಆನಂದ ಅವರು ಇಪ್ಪತ್ತೈದು ಸಾವಿರಕ್ಕೂ ಅಧಿಕ ಹಣದ ಚೆಕ್ಕನ್ನು ಅವರಿಗೆ ನೀಡಿದ್ದಾರೆ. ಇದೀಗ ಕೋರ್ಟ್ ಇವರ ಮೇಲೆ ಎಫ್ಐಆರ್ ದಾಖಲಿಸಲು ಸೂಚನೆ ನೀಡಿದೆ.