ಇವತ್ತಿನ ದಿನಗಳಲ್ಲಿ ಯುವಜನತೆಗೆ ಏನಾಗಿದೆಯೋ...ತಮ್ಮ ಉತ್ತಮ ಭವಿಷ್ಯವನ್ನು ಕಟ್ಟಿಕೊಳ್ಳಬೇಕಾದವರು ಪ್ರೀತಿ-ಪ್ರೇಮ, ಮಾದಕ ವ್ಯಸನದಂತಹ ಬಲೆಗೆ ಬಿದ್ದು ತಮ್ಮ ಜೀವನವನ್ನು ಸರ್ವನಾಶ ಮಾಡಿಕೊಳ್ಳುತ್ತಿದ್ದಾರೆ. ಹೆತ್ತವರ ಆಸೆಗೆ ಕೊಳ್ಳಿಯಿಟ್ಟು ಜೀವ- ಜೀವನವನ್ನೇ ಅಂತ್ಯವಾಗಿಸುವ ದುರಂತಕ್ಕೆ ಸಿಕ್ಕಿಕೊಂಡು ಬಿಡುತ್ತಾರೆ. ಇದೀಗ ಚಿಕ್ಕಮಗಳೂರಿನಲ್ಲಿ ಭಯಾನಕ ಘಟನೆಯೊಂದು ಬೆಳಕಿಗೆ ಬಂದಿದೆ.
ಅನುಮಾನಾಸ್ಪದವಾಗಿ ಪತ್ತೆಯಾದ ಬೆಂಗಳೂರು ಮೂಲದ ಯುವಕ-ಯುವತಿ ಮೃತದೇಹ..!
ಬೆಂಗಳೂರು ಮೂಲದವರು ಎನ್ನಲಾದ ಯುವಕ ಮತ್ತು ಯುವತಿಯ ಮೃತದೇಹ ಅನುಮಾನಾಸ್ಪದ ರೀತಿಯಲ್ಲಿ ಚಿಕ್ಕಮಗಳೂರು ತಾಲ್ಲೂಕಿನ ದಾಸರಹಳ್ಳಿ ಗ್ರಾಮದಲ್ಲಿ ಪತ್ತೆಯಾಗಿದೆ. ಯುವತಿ ಕಾರಿನಲ್ಲಿ ಸಾವನ್ನಪ್ಪಿದ್ದು ಯುವಕನ ಮೃತದೇಹ ಕಾರು ನಿಲ್ಲಿಸಿದ್ದ ಪಕ್ಕದಲ್ಲೇ ಇದ್ದ ಮರದಲ್ಲಿ ಪತ್ತೆಯಾಗಿದೆ. ಇವರಿಬ್ಬರು ೨೫-೩೦ ವಯಸ್ಸಿನವರು ಆಗಿರಬಹುದೆಂದು ಅಂದಾಜಿಸಲಾಗಿದೆ.
ಅನುಮಾನಕ್ಕೆ ಎಡೆಮಾಡಿ ಕೊಟ್ಟ ಇವರ ಮೃತದೇಹದ ಮೇಲಿನ ಗುರುತು..!
ಯುವತಿಯ ಕುತ್ತಿಗೆಯಲ್ಲಿ ಕತ್ತು ಹಿಸುಕಿರುವ ಗುರುತುಗಳಿದ್ದು ಯುವಕ ಮರಕ್ಕೆ ಶಾಲ್ ನಲ್ಲಿ ನೇಣುಹಾಕಿಕೊಂಡಿದ್ದಾನೆ. ವೇಲ್ ಕುಣಿಕೆಗೆ ಕೊರಳೊಡ್ಡಿ ಜಿಗಿದರೆ ವೇಲ್ ತುಂಡಾಗುವ ಸಾಧ್ಯತೆಯೂ ಇದೆ ಆದರೆ ಯುವಕನ ಶವ ಮಾತ್ರ ನೇತಾಡುತ್ತಿತ್ತು. ಕಾರು ಕೂಡಾ ರಸ್ತೆಯಲ್ಲಿ ನಿಂತಿರದೆ ಪಕ್ಕದ ಚರಂಡಿಗೆ ಎರಡು ಚಕ್ರಗಳು ಇಳಿದಿದ್ದವು. ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.