ಮಂಗಳೂರು: ಒಮ್ಮೊಮ್ಮೆ ಅತಿಯಾಗಿ ಕೂಡಿಸಿಟ್ಟ ಹಣವೂ ನೀರಿಗೆ ಹೋಮ ಮಾಡಿದಂತೆ ಇಲ್ಲವಾಗಿ ಬಿಡುತ್ತದೆ. ಹಣ ಅಂದ್ರೆ ಹಾಗೆ. ಎಲ್ಲರನ್ನು, ಅವರ ಪರಿಸ್ಥಿತಿಯನ್ನು ಬದಲಾಯಿಸಿ ಬಿಡುತ್ತದೆ. ಹಣಕ್ಕಾಗಿಯೇ ಎಲ್ಲರ ಒದ್ದಾಟ, ಎಲ್ಲರ ಗೋಳಾಟ...ಆದರೆ ಕೂಡಿಸಿಟ್ಟ ಲಕ್ಷಾಂತರ ರೂ. ಹಣ ಗೆದ್ದಲು ಹಿಡಿದರೆ ಹೇಗಾದೀತು...? ಅಂತಹುದೇ ಘಟನೆಯೊಂದು ಮಂಗಳೂರಿನಲ್ಲಿ ನಡೆದಿದೆ.
ಬ್ಯಾಂಕ್ ಲಾಕರ್ ನಲ್ಲಿಟ್ಟಿದ್ದ ಹಣ ಗೆದ್ದಲು ಹಿಡಿದು ಪುಡಿಪುಡಿ..!
ಮಂಗಳೂರಿನ ಕೆನರಾ ಬ್ಯಾಂಕ್ ಶಾಖೆಯೊಂದರ ಲಾಕರ್ ನಲ್ಲಿಟ್ಟಿದ್ದ ಎಂಟು ಲಕ್ಷ ರೂಪಾಯಿ ಹಣ ಗೆದ್ದಲು ಹಿಡಿದು ಪುಡಿಯಾದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಬೆಂಗಳೂರಿನ ಕೆನರಾ ಬ್ಯಾಂಕಿನ ಪ್ರಧಾನ ಕಚೇರಿಗೆ ಸಫಲ್ ಎಂಬವರು ಬಂದು ದೂರು ನೀಡಿದ್ದಾರೆ.
ಇವರು ಮಂಗಳೂರಿನ ಕೋಟೆಕಾರ್ ನಲ್ಲಿರುವ ಕೆನರಾ ಬ್ಯಾಂಕಿನಲ್ಲಿ ಎಂಟು ಲಕ್ಷ ರೂ. ಇಟ್ಟಿದ್ದರು. ಆರು ತಿಂಗಳ ಬಳಿಕ ಔಷಧಿಗಾಗಿ ದುಡ್ಡು ತೆಗೆಯಲು ಬ್ಯಾಂಕ್ ಗೆ ಬಂದಿದ್ದಾರೆ. ಅಧಿಕಾರಿಗಳು ಖುದ್ದಾಗಿ ಲಾಕರ್ ಓಪನ್ ಮಾಡಿದ್ದಾರೆ. ಮಳೆನೀರಿನಲ್ಲಿ ನೆಂದ ಸ್ಥಿತಿಯಲ್ಲಿದ್ದ ದುಡ್ಡು ಸಂಪೂರ್ಣವಾಗಿ ಕಪ್ಪಾಗಿತ್ತು. ಏನಿದು ಎಂದು ತೆಗೆದು ನೋಡಿದರೆ ಹಣ ಸಂಪೂರ್ಣವಾಗಿ ಗೆದ್ದಲು ಹಿಡಿದು ನೋಟುಗಳು ಚೂರಾಗಿ ಬಿದ್ದಿತ್ತು.
ಬೇಸರ ವ್ಯಕ್ತಪಡಿಸಿದ ಹಣ ಕಳೆದುಕೊಂಡ ಸಫಲ್..!
ಆರ್ ಬಿಐ ನಿಯಮದ ಪ್ರಕಾರ ಹಣವನ್ನು ಲಾಕರ್ ನಲ್ಲಿ ಇಡುವಂತಿಲ್ಲ. ಆದ್ದರಿಂದ ಇದಕ್ಕೂ ನಮಗೂ ಸಂಬಂಧವಿಲ್ಲ ಎಂದು ಬ್ಯಾಂಕಿನವರು ತಿಳಿಸಿದ್ದಾರೆ. ಪ್ರಧಾನ ಕಚೇರಿಗೆ ಭೇಟಿ ನೀಡಿ ಹಳೆಯ ಕಟ್ಟಡ ಪರಿಸ್ಥಿತಿಯಿಂದ ಹೀಗಾಗಿದೆ. ಸಮಸ್ಯೆ ಬಗೆಹರಿಸಬೇಕು ಎಂದು ಮನವಿ ಮಾಡಿದ್ದಾರೆ.