ಬೆಂಗಳೂರು: ಧಾರ್ಮಿಕ ಕೇಂದ್ರಗಳು ಬೆಳೆಯುವ ಮಕ್ಕಳಿಗೆ ನೈತಿಕ ಶಿಕ್ಷಣವನ್ನು ಪೂರೈಸುವ ಸಂಸ್ಕಾರ ಕೇಂದ್ರವಾಗಬೇಕು. ಈಗಿನ ಮಕ್ಕಳನ್ನು ಭವಿಷ್ಯದ ಉತ್ತಮ ಪ್ರಜೆಗಳನ್ನಾಗಿ ರೂಪಿಸುವ ಜವಾಬ್ದಾರಿ ಕೇವಲ ಪೋಷಕರದ್ದು ಮಾತ್ರವಲ್ಲ. ಪ್ರತಿಯೊಬ್ಬರದ್ದೂ ಹೌದು.
ಧಾರ್ಮಿಕ ಕೇಂದ್ರಗಳಲ್ಲಿ ಇಂದು ಅನೇಕ ರೀತಿಯ ಶಿಕ್ಷಣವನ್ನು ನಾವು ಮಕ್ಕಳಿಗೆ ನೀಡುತ್ತೇವೆ. ಇದು ಮಕ್ಕಳ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ, ಇದು ಮಕ್ಕಳ ಬದುಕಿಗೆ, ಭವಿಷ್ಯಕ್ಕೆ ಅಡಿಪಾಯ ಹಾಕುತ್ತಾ...ಸರ್ವಾಂಗೀಣ ಬೆಳವಣಿಗೆಗೆ ಪೂರಕವಾಗುತ್ತಾ ಎಂಬಿತ್ಯಾದಿ ಅಂಶಗಳನ್ನು ಗಣನೆಗೆ ತೆಗೆದುಕೊಳ್ಳಬೇಕು. ಇಲ್ಲೊಬ್ಬ ಧರ್ಮಕೇಂದ್ರದ ಧರ್ಮಗುರು ಮನಸೋ ಇಚ್ಛೆ ಅಪ್ರಾಪ್ತ ಬಾಲಕಿಯರ ಮೇಲೆ ದೌರ್ಜನ್ಯ ನಡೆಸುತ್ತಿರುವ ವಿಲಕ್ಷಣ ಘಟನೆ ನಡೆದಿದೆ.
ಮದರಸಾದಲ್ಲಿ ಬಾಲಕಿಯರ ಮೇಲೆ ಮನಸೋ ಇಚ್ಛೆ ಹಲ್ಲೆ..!
ಮದರಸಾದಲ್ಲಿರುವ ಮೊಹಮ್ಮದ್ ಹಸನ್ ಎಂಬಾತನೋರ್ವ ಬಾಲಕಿಯರಿಗೆ ಹಿಂಸೆ ನೀಡಿ ಕ್ರೌರ್ಯ ನಡೆಸುತ್ತಿರುವ ಘಟನೆ ಬೆಂಗಳೂರಿನ ಥಣಿಸಂದ್ರದಲ್ಲಿ ನಡೆದಿದೆ. ಈ ಮದರಸ 2021ರಿಂದ ನಡೆಯುತ್ತಿದೆ. ಇಲ್ಲಿ ಒಟ್ಟು 200 ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಮೊಹಮ್ಮದ್ ಹಸನ್ ಈ ಮದರಸ ನಡೆಸುತ್ತಿದ್ದು ಈತನ ಸಹೋದರಿ ನಿಶಾ ಪ್ರಾಂಶುಪಾಲೆ ಆಗಿದ್ದಾರೆ.
ಮಕ್ಕಳು ತಪ್ಪು ಮಾಡಿದ್ದಾರೆ ಎಂದು ಆರೋಪಿಸಿ ನಿರಂತರ ಹಲ್ಲೆ...!!
ಬಾಲಕಿಯರು ತಪ್ಪು ಮಾಡಿದ್ದಾರೆ ಎಂದು ಆರೋಪಿಸಿ ಮೊಹಮ್ಮದ್ ಹಸನ್ ಕಚೇರಿಗೆ ಕರೆದು ನಾಲ್ಕೈದು ಮಕ್ಕಳ ಮೇಲೆ ಹಲ್ಲೆ ಮಾಡಿದ್ದಾನೆ. ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಮಕ್ಕಳ ಪೋಷಕರು ಗರಂ ಆಗಿದ್ದು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಪೋಷಕರು ಮದರಸಾದ ಮುಂದೆ ಗಲಾಟೆ ಮಾಡಿದ್ದಾರೆ. ಇದೀಗ ಹಸನ್ ನ್ನು ಕೊತ್ತನೂರು ಪೊಲೀಸರು ಬಂಧಿಸಿದ್ದಾರೆ.