ಕಾರ್ಕಳದ ಗೇರು ಬೀಜ ಉದ್ಯಮಿಗೆ ಲಕ್ಷಾಂತರ ರೂ. ವಂಚನೆ ; ಪುಣೆಯ ವ್ಯಾಪಾರಿಯ ವಿರುದ್ಧ ಪ್ರಕರಣ ದಾಖಲು!

  • 23 Feb 2025 05:15:35 PM


ಕಾರ್ಕಳ: ಗೇರು ಬೀಜ ಉದ್ಯಮಿಗೆ ಲಕ್ಷಾಂತರ ರೂ. ವಂಚಿಸಿದ ಘಟನೆ ಕಾರ್ಕಳದ ಕಡ್ತಲ ಎಂಬಲ್ಲಿ ಬೆಳಕಿಗೆ ಬಂದಿದೆ. ಯೋಗೀಶ್ ಎಂಬಾತ ಪಾಲುದಾರರಾಗಿರುವ ತಿರುಮಲ ಕ್ಯಾಶ್ಯೂ ಇಂಡಸ್ಟ್ರೀಸ್‌ಗೆ ಈ ವಂಚನೆಯನ್ನು ಮಾಡಿರುವುದಾಗಿ ಮಾಹಿತಿ ಲಭ್ಯವಾಗಿದೆ.

 

ಮಹಾರಾಷ್ಟ್ರದ ಪುಣೆಯ ಕರಾಡಿ ಇಂಡಸ್ಟ್ರಿಯಲ್ ಏರಿಯಾದಲ್ಲಿರುವ ಗೊಬಿಂದ್ ಡ್ರೈಫ್ರೂಟ್ಸ್ ಕಂಪನಿಯ ಮಾಲಕ ದಲ್ಜೀತ್ ಸಿಂಗ್ ಅವರ ವಿರುದ್ಧ ವಂಚನೆ ಆರೋಪ ಬಂದಿರುತ್ತದೆ. ಯೋಗೀಶ್ ಅವರು 18,000 ಕೆಜಿ ಕಚ್ಚಾ ಗೋಡಂಬಿಯನ್ನು ಒಟ್ಟು ₹22,10,300 ಮೌಲ್ಯದೊಂದಿಗೆ ದಲ್ಜೀತ್ ಸಿಂಗ್‌ ಅವರಿಗೆ ಕಳುಹಿಸಿ ಕೊಟ್ಟಿದರೆಂದೂ, ಆರೋಪಿ ಈ ಮೊತ್ತದ ಕೆಲವು ಭಾಗವನ್ನು ಪಾವತಿಸಿದ್ದಾರೆ ಆದರೆ ಇನ್ನುಳಿದ ಭಾಗ ₹11,46, 400ದಷ್ಟು ಹಣವನ್ನು ನೀಡದೆ ಮೋಸ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

 

ಇದರ ಕುರಿತಾಗಿ ಯೋಗೀಶ್ ಅವರು ನೀಡಿದ ದೂರಿನ ಪ್ರಕಾರ ಅಜೆಕಾರು ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ. ಪ್ರಕರಣ ಸಂಬಂಧ ಪೊಲೀಸರು ಮುಂದಿನ ತನಿಖೆಯನ್ನು ಕೈಗೊಂಡಿದ್ದು, ಆರೋಪಿ ವಿರುದ್ಧ ಮುಂದಿನ ಕಾನೂನು ಕ್ರಮ ಕೈ ಗೊಳ್ಳುವುದರ ಸಾಧ್ಯತೆ ಇದೆ.