ಮಂಜೇಶ್ವರ : ಜೀವನದಲ್ಲಿ ಕಷ್ಟ ಬಂದಾಗ ಮನುಷ್ಯ ಕೆಲವೊಮ್ಮೆ ಕುಗ್ಗಿ ಹೋಗುತ್ತಾನೆ. ಆತ್ಮವಿಶ್ವಾಸ, ಆತ್ಮಸ್ಥೈರ್ಯ ಎರಡನ್ನೂ ಕಳೆದುಕೊಳ್ಳುತ್ತಾನೆ. ಕಷ್ಟದಿಂದ ಹೊರ ಬರಲು ಬೇರೆ ಏನು ಆಯ್ಕೆ ಇದೆ ಎಂಬುದನ್ನು ಯೋಚಿಸುವಷ್ಟು ಸಹನೆ ಅವನಲ್ಲಿ ಇರೋದಿಲ್ಲ. ಆಗಲೇ ಬದುಕಿನಲ್ಲಿ ದುಡುಕು ನಿರ್ಧಾರಗಳನ್ನು ತೆಗೆದುಕೊಳ್ಳಲು ಯತ್ನಿಸುತ್ತಾರೆ. ಆದರೆ ಅವರ ಆಯಸ್ಸು ಮುಗಿದಿರಲ್ವೋ ಏನೋ...ಅದೃಷ್ಟವಶಾತ್ ಅದರಲ್ಲೂ ಬಚಾವಾಗಿ ಬಿಡುತ್ತಾರೆ. ಇಂತಹ ವಿಚಿತ್ರ ಘಟನೆಯೊಂದು ಮಂಜೇಶ್ವರದಲ್ಲಿ ನಡೆದಿದೆ.
ಸಮುದ್ರಕ್ಕೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ದಂಪತಿ..!!
ಸಮುದ್ರ ತೀರದಲ್ಲಿ ದಂಪತಿ ಸಮುದ್ರಕ್ಕೆ ಹಾರಿ ಜೀವಾಂತ್ಯಗೊಳಿಸಲು ಯತ್ನಿಸಿದ ಘಟನೆ ಮಂಜೇಶ್ವರದಲ್ಲಿ ನಡೆದಿದೆ. ಅದೃಷ್ಟವಶಾತ್ ಪತಿ ಸಾವನ್ನಪ್ಪಿದ್ದರೆ ಪತ್ನಿಯನ್ನು ಸ್ಥಳೀಯರು ರಕ್ಷಿಸಿದ್ದಾರೆ. ಕಡಂಬಾರು ನೀರೋಲ್ಪೆ ನಿವಾಸಿ, ಹೊಸಂಗಡಿ ಎಸ್.ಎ ಟೈಲರ್ ಭಾಸ್ಕರ್ ನೀರೋಲ್ಪೆ ಮೃತ ದುರ್ದೈವಿಯಾಗಿದ್ದಾರೆ. ಪೊಲೀಸರು ಹುಡುಕಾಡಿದ ಮೇಲೆ ಉಪ್ಪಳ ಮುಸೋಡಿ ಅಧಿಕ ಸಮುದ್ರದಲ್ಲಿ ಭಾಸ್ಕರ್ ಅವರ ಮೃತದೇಹ ಪತ್ತೆಯಾಗಿದೆ. ಇವರ ಈ ನಿರ್ಧಾರಕ್ಕೆ ಕಾರಣ ಏನೆಂಬುವುದು ತಿಳಿದುಬಂದಿಲ್ಲ.
ಪತಿಯ ದೇಹ ಮರಣೋತ್ತರ ಪರೀಕ್ಷೆಗೆ, ಪತ್ನಿ ದೇರಳಕಟ್ಟೆ ಆಸ್ಪತ್ರೆಗೆ..!
ಭಾಸ್ಕರ್ ಅವರ ಮೃತದೇಹವನ್ನು ಮಂಗಲ್ಪಾಡಿ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದ್ದು, ಪತ್ನಿ ಮಾಲತಿ ಅವರನ್ನು ಮಂಗಳೂರಿನ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಭಾಸ್ಕರ್ ಅವರು ಬದ್ರಿಯಾ ಕಾಂಪ್ಲೆಕ್ಸ್ ನಲ್ಲಿ ಹಲವು ವರ್ಷಗಳಿಂದ ಟೈಲರ್ ಅಂಗಡಿ ಇಟ್ಟುಕೊಂಡಿದ್ದರು. ಘಟನೆ ಕುರಿತಂತೆ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.