ಉಡುಪಿ| ಕೊರಗಜ್ಜನ ಮದ್ಯಬಾಟಲಿ ಕದಿಯಲು ಖದೀಮ..!! ಭಕ್ತರಿಂದ ಬಿತ್ತು ಗೂಸಾ..!

  • 25 Feb 2025 03:04:14 PM

ಉಡುಪಿ: ಕರಾವಳಿಯಲ್ಲಿ ಭಕ್ತರ ಆರಾಧ್ಯ ದೈವವಾದ ಕೊರಗಜ್ಜನಿಗೆ ಭಕ್ತರು ತನ್ನದೇ ಆದ ವಿಶೇಷವಾದ ಪ್ರಾಶಸ್ತ್ಯವನ್ನು ನೀಡುತ್ತಾರೆ. ಭಕ್ತಿ-ನಂಬಿಕೆಗಳಿಂದ ಆರಾಧಿಸುತ್ತಾರೆ. ಈ ದೈವದ ಕಾರ್ಣಿಕಕ್ಕೆ ಅನೇಕ ಭಕ್ತರು ಶರಣಾಗುತ್ತಾರೆ. ತುಳುನಾಡಿನಲ್ಲಿ ಅನೇಕ ಕಡೆ ಕೊರಗಜ್ಜ ದೈವದ ಕ್ಷೇತ್ರವಿದೆ. ಇಲ್ಲಿ ಪ್ರತಿದಿನ ಪೂಜೆ ನಡೆಯುವುದರ ಜೊತೆಗೆ ಭಕ್ತರು ಹರಕೆಯ ರೂಪವಾಗಿ ವೀಳ್ಯದೆಲೆ, ಚಕ್ಕುಲಿ ಮತ್ತು ಮದ್ಯವನ್ನು ನೀಡುತ್ತಾರೆ. ಇದೀಗ ಕುಡಿತದ ಚಟ ಹೊಂದಿದ್ದ ವ್ಯಕ್ತಿ ಅಲ್ಲಿಯ ಮದ್ಯವನ್ನು ಕದ್ದೊಯ್ಯಲು ಯತ್ನಿಸಿದ ಅಪರೂಪವಾದ ಘಟನೆ ನಡೆದಿದೆ. 

 

ಕೊರಗಜ್ಜನಿಗೆ ಸಮರ್ಪಿಸಿದ್ದ ಮದ್ಯ ಕದಿಯಲು ಯತ್ನಿಸಿದ ಯುವಕ..!

 

ಉಡುಪಿಯ ನೆಲ್ಲಿಕಟ್ಟೆಯಲ್ಲಿರುವ ಬಬ್ಬುಸ್ವಾಮಿ ಹಾಗೂ ಪರಿವಾರ ದೈವಗಳ ಕ್ಷೇತ್ರದಲ್ಲಿ ನಂಬಿದವರಿಗೆ ಇಂಬು ಕೊಡುವ ಕಾರ್ಣಿಕ ಶಕ್ತಿ ಕೊರಗಜ್ಜನಿಗೆ ಭಕ್ತರು ಸಮರ್ಪಿಸಿದ್ದ ಮದ್ಯವನ್ನು ಕದಿಯಲು ಯತ್ನಿಸಿದ ಯುವಕನಿಗೆ ಭಕ್ತರು ಧರ್ಮದೇಟು ನೀಡಿದ ಅಪರೂಪದ ಘಟನೆಯೊಂದು ನಡೆದಿದೆ. ಶನಿವಾರ ದೈವಸ್ಥಾನದಲ್ಲಿ ವಾರ್ಷಿಕ ನೇಮೋತ್ಸವವನ್ನು ಆಯೋಜನೆ ಮಾಡಲಾಗಿತ್ತು. ಈ ಸಂದರ್ಭ ಸಾವಿರಾರು ಭಕ್ತರು ಹರಕೆಯ ರೂಪದಲ್ಲಿ ಅಜ್ಜನಿಗೆ ಮದ್ಯವನ್ನು ಸಮರ್ಪಿಸಿದ್ದಾರೆ. ಈ ಸಂದರ್ಭ ಕೊರಗಜ್ಜನ ಸನ್ನಿಧಿ ಬಳಿ ಭಕ್ತರ ಜೊತೆಗೇ ಕುಳಿತ್ತಿದ್ದ ಕುಡಿತದ ಚಟ ಹೊಂದಿದ್ದ ಯುವಕನೋರ್ವ ಅಲ್ಲಿಂದ ಮದ್ಯ ಬಾಟಲಿಯನ್ನು ಎಗರಿಸಿದ್ದಾನೆ. ಇದನ್ನು ನೋಡಿ ಕೆಲವರು ಆತನಿಗೆ ಗದರಿಸಿದ್ದಾರೆ. 

 

ಹೆದರಿ ಬಾಟಲಿ ಅಲ್ಲೇ ಬಿಟ್ಟು ಎಸ್ಕೇಪ್ ಆಗಲು ಯತ್ನಿಸಿದ್ದ ಖದೀಮ...!!

 

ಆತನಿಗೆ ಗದರಿಸಿದಾಗ ಹೆದರಿ ತಾನು ಸಿಕ್ಕಿ ಬಿದ್ದೆ ಎಂಬ ಭಯದಿಂದ ಬಾಟಲಿಯನ್ನು ಅಲ್ಲೇ ಬಿಟ್ಟು ಓಡಲು ಯತ್ನಿಸಿದ್ದಾನೆ. ಹಲವು ಕಡೆಗಳಲ್ಲಿ ಕಳ್ಳತನ ಮಾಡಿ ಸಿಕ್ಕಿಬಿದ್ದಿದ್ದ ಈತ ಇಲ್ಲಿ ಕೂಡಾ ತನ್ನ ಚಾಳಿ ಮುಂದುವರೆಸಿದ್ದಾನೆ. ಆದರೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಾನೆ‌. ಅವನಿಗೆ ಭಕ್ತರು ಎರಡೇಟು ಕೊಟ್ಟು ಕಳುಹಿಸಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಾ ಇದೆ.