ಮಂಜೇಶ್ವರ: ಪ್ರಥಮ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ನಿವಾಸ ಪಕ್ಕದಲ್ಲಿ ಜನತೆಯ ತೆರಿಗೆ ಹಣದಲ್ಲಿ ನಿರ್ಮಿಸಿದ ಸಭಾಂಗಣ ನಿರ್ಮಾಣವಾಗಿ 10 ವರ್ಷ ವಾದರೂ , ಸಭಾಂಗಣ ಇನ್ನು ಪೂರ್ತಿ ಆಗದೆ, ನಾಡಿಗೆ, ಸ್ಥಳೀಯ ಕನ್ನಡಿಗರಿಗೆ, ಕನ್ನಡ ಕಾರ್ಯಕ್ರಮಗಳಿಗೆ, ಭಾಷಾ ಸಂಗಮ ಭೂಮಿಯ ಭಾಷಾ ಚಟುವಟಿಕೆಗಳಿಗೆ ಉಪಯೋಗ ಶೂನ್ಯವಾಗಿರೋದು ರಾಷ್ಟ್ರ ಕವಿ ಮಂಜೇಶ್ವರ ಗೋವಿಂದ ಪೈಗಳಿಗೆ ಕೇರಳ ಸರಕಾರ ಮಾಡುವ ಅವಮಾನ ಎಂದು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ ಆದರ್ಶ ಬಿ.ಎಂ ಹೇಳಿದ್ದಾರೆ. ಜೊತೆಗೆ ಕೇರಳ ಸರಕಾರ ಹಾಗೂ ಅಕಾಡೆಮಿಯ ಅನಾಸ್ಥೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಗೋವಿಂದ ಪೈಗಳ ಸಾಧನೆಗೆ ಪ್ರತಿಬಿಂಬವಾಗಿ ನೂರಾರು ಕನ್ನಡ ಅಭಿಮಾನಿಗಳಿಗೆ, ಸ್ಥಳೀಯ ಕಲಾ - ಸಾಂಸ್ಕೃತಿಕ ರಂಗಕ್ಕೆ ಬೆಳಕಾಗಬೇಕಿದ್ದ ಹಾಗೂ ಸುಸಜ್ಜಿತ ಸಭಾಂಗಣವಾಗಿ ಜಿಲ್ಲೆಗೆ ಮಾದರಿಯಾಗಬೇಕಾದ ಈ ಸಭಾಂಗಣದ ಅನಾಸ್ಥೆ ಕನ್ನಡಿಗರಿಗೆ ಮಾತ್ರವಲ್ಲ, ಇದು ನೇರವಾಗಿ ಗೋವಿಂದ ಪೈ ಗಳಿಗೆ ಮಾಡುತ್ತಿರುವ ಅವಮಾನ ಎಂದು ಅವರು ಹೇಳಿದರು. 10 ವರ್ಷ ಕಳೆದರೂ ಸಭಾಂಗಣ ನಿರ್ಮಾಣ ಕಾರ್ಯ ಪೂರ್ಣ ವಾಗಿಲ್ಲ. ಆದರೂ ಕಲಾ ಸಂಸ್ಕೃತಿಕ ಚಟುವಟಿಕೆಗಳಿಗೆ ಹಾಗೂ ಸ್ಥಳೀಯ ಜನತೆಗೆ ಉಪಯೋಗವಾಗುವಂತೆ ಮಾಡಬವುದಿತ್ತು. ಕೇರಳ ಸರಕಾರ ಹಾಗೂ ಶಾಸಕರ ಇಚ್ಚಾ ಶಕ್ತಿಯ ಕೊರತೆ,
ಜಿಲ್ಲಾಧಿಕಾರಿ ಅಧ್ಯಕ್ಷರಾಗಿರುವ ಸಮಿತಿಯ ಗುರಿ ಇಲ್ಲದ ಯೋಜನೆ, ಅಕಾಡೆಮಿಯ ಬೇಜವಾಬ್ದಾರಿತನ ಸಭಾಂಗಣ ಇಂದು ಪಾಲುಬಿಳುವ ಅವಸ್ಥೆಗೆ ಕಾರಣ ಎಂದು ಬಿಜೆಪಿ ಆರೋಪಿಸಿದೆ. ಸಭಾಂಗಣ ಕಾಮಗಾರಿ ಕೂಡಲೇ ಪೂರ್ತಿಗೊಳಿಸಿ, ಸುಸಜ್ಜಿತ ಸಭಾಂಗಣವನ್ನ ಕನ್ನಡ ಕಲಾ ಸಂಸ್ಕೃತಿಕ ಚಟುವಟಿಕೆಗಳಿಗೆ ಮೀಸಲಿಡಬೇಕೆಂದು ಬಿಜೆಪಿ ಮಂಜೇಶ್ವರ ಮಂಡಲ ಅಧ್ಯಕ್ಷ
ಆದರ್ಶ ಬಿ.ಎಂ ಆಗ್ರಹಿಸಿದ್ದಾರೆ.
ಸರಕಾರದ ಕನ್ನಡ ವಿರೋಧಿ ನೀತಿಯ ಭಾಗವೇ ಇದು ಎಂದು ಬಿಜೆಪಿ ಪ್ರಶ್ನಿಸಿದೆ. ಬಿಜೆಪಿ ಮಂಡಲ ಸಭೆಯಲ್ಲಿ ಈ ವಿಚಾರವಾಗಿ ಚರ್ಚಿಸಲಾಯಿತು. ಆದರ್ಶ ಬಿ. ಎಂ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಮಣಿಕಂಠ ರೈ, ಎ.ಕೆ ಕಯ್ಯಾರ್, ಯಾದವ್ ಬಡಾಜೆ, ಸದಾಶಿವ ಚೇರಲ್, ಲೋಕೇಶ್ ನೋಂಡ, ಜಯಲಕ್ಷ್ಮಿ ಭಟ್, ಸುಬ್ರಮಣ್ಯ ಭಟ್, ಪದ್ಮನಾಭ ರೈ, ಹರಿಶ್ಚಂದ್ರ ಎಂ, ಜಗದೀಶ್ ಚೆಂಡೆಲ್, ಚಂದ್ರವತಿ ಶೆಟ್ಟಿ, ಮಂಜುನಾಥ್ ಬಾಯಾರ್ ತುಳಸಿ ಕುಮಾರಿ ಹಾಗೂ ಜನಪ್ರತಿನಿಧಿಗಳು, ಸಮಿತಿ ಸದಸ್ಯರು ಉಪಸ್ಥಿತರಿದ್ದರು. ಯತೀರಾಜ್ ಶೆಟ್ಟಿ ಸ್ವಾಗತಿಸಿ, ಕೆ.ವಿ ಭಟ್ ವಂದಿಸಿದರು.
ಗಿಳಿವಿಂಡು ಸಭಾಂಗಣ ಅವಗಣಿಕೆ, ರಾಷ್ಟ ಕವಿ ಪೈಗಳಿಗೆ ಮಾಡುವ ಅವಮಾನ - ಬಿಜೆಪಿ
- 30 Oct 2024 01:30:00 PM

