ಗ್ಯಾರಂಟಿಯಿಂದ ಖಾಲಿಯಾದ ಸಿದ್ಧು ಸರ್ಕಾರ!; ರಾಜ್ಯದ ಜನರಿಗೆ ಕರೆಂಟ್ ಶಾಕ್ ಕೊಟ್ಟ ಕಾಂಗ್ರೆಸ್..!!

  • 25 Feb 2025 03:08:21 PM

ಗ್ಯಾರಂಟಿ ಯೋಜನೆಯ ಆಸೆ ತೋರಿಸಿ, ಜನರಲ್ಲಿ ನಂಬಿಕೆ ಹುಟ್ಟಿಸಿ ಕಾಂಗ್ರೆಸ್ ಹೇಗೋ ಅಧಿಕಾರದ ಗದ್ದುಗೆಯನ್ನು ಏರಿದೆ. ಆದರೆ ಈಗ ಬೆಲೆ ಏರಿಕೆ, ತೆರಿಗೆ ಹೆಚ್ಚಳದ ಕಾಟದಿಂದ ಜನ ತತ್ತರಿಸಿ ಹೋಗಿದ್ದಾರೆ. ಇದೀಗ ಮತ್ತೆ ಸರ್ಕಾರ ಜನರಿಗೆ ತ್ರಿಬಲ್ ಶಾಕ್ ನೀಡಲು ಅಣಿಯಾಗಿದೆ. 

 

ಮತ್ತೆ ವಿದ್ಯುತ್ ದರ ಏರಿಕೆ, ತ್ರಿವಳಿ ಮನವಿ...!!

 

ಗ್ಯಾರಂಟಿ ಯೋಜನೆಗೆ ಇದೀಗ ಗ್ಯಾರಂಟಿಯೇ ಇಲ್ಲದಂತಾಗಿದೆ. ಬಿಟ್ಟಿ ಭಾಗ್ಯಗಳಲ್ಲಿ ಜನರನ್ನು ಮಂಗ ಮಾಡಿ ಇದೀಗ ಬೊಕ್ಕಸ ತುಂಬಿಸಿಕೊಳ್ಳಲು ಸರ್ಕಾರದ ಜನರದ್ದೇ ಪ್ರಾಣ ಹಿಂಡುತ್ತಿದೆ. ಬೆಸ್ಕಾಂ ಸೇರಿ ರಾಜ್ಯದ ವಿವಿಧ ಎಸ್ಕಾಂಗಳು ಮುಂದಿನ ಮೂರು ವರ್ಷಗಳ ಅವಧಿಯ ವಿದ್ಯುತ್ ದರ ಹೆಚ್ಚಳವನ್ನು ಒಂದೇ ಬಾರಿಗೆ ಪ್ರಕಟಿಸುವಂತೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು ಪ್ರತೀ ಯೂನಿಟ್ ಗೆ ಮೂವತ್ತೇಳು ಪೈಸೆಯಿಂದ ಬರೋಬ್ಬರಿ ಒಂದು ರೂಪಾಯಿಗೂ ಅಧಿಕ ಹೆಚ್ಚಳಕ್ಕೆ ಮನವಿ ಮಾಡಿದೆ. ಹೀಗಾಗಿ ಎಪ್ರಿಲ್ ಒಂದರಿಂದ ಅನ್ವಯವಾಗುವಂತೆ ಮಾರ್ಚ್ ಮೊದಲ ಅಥವಾ ಎರಡನೇ ವಾರದಲ್ಲಿ ವಿದ್ಯುತ್ ದರ ಹೆಚ್ಚಳವನ್ನು ಕೆಇಆರ್ ಸಿ ಪ್ರಕಟಿಸಿದೆ. 

 

ಸಬ್ಸಿಡಿ ನೀಡದಿದ್ದರೆ ಜನರಿಂದಲೇ ವಸೂಲಿ ಮಾಡುವ ಮಾಸ್ಟರ್ ಪ್ಲ್ಯಾನ್...!!

 

ಬೆಲೆ ಏರಿಕೆಯ ಜೊತೆಗೆ ಗೃಹಜ್ಯೋತಿ ಸಬ್ಸಿಡಿ ಹಣ ಮುಂಗಡವಾಗಿ ಪಾವತಿಸದಿದ್ದರೆ ಫಲಾನುಭವಿ ವಿದ್ಯುತ್ ಬಳಕೆದಾರರಿಂದಲೇ ಎಎಸ್ಕಾಂಗಳು ಸಂಗ್ರಹಿಸಲಿದೆ ಎಂಬ ಆದೇಶ ಮಾಡಲಿದೆಯೇ ಎಂಬ ಆತಂಕ ಎದುರಾಗಿದೆ. ಗೃಹಜ್ಯೋತಿ ಯೋಜನೆಯಡಿ ಕೋಟ್ಯಾಂತರ ಅರ್ಹ ಬಳಕೆದಾರರು ನೋಂದಣಿ ಮಾಡಿಕೊಂಡಿದ್ದಾರೆ.

 

ಇದೀಗ ಇವರೆಲ್ಲರಿಗೂ ವಿದ್ಯುತ್ ಶಾಕ್ ಬಿಸಿ ಕೊಡಲಿದೆ ಎಂಬ ಶಂಕೆ ವ್ಯಕ್ತವಾಗುತ್ತಿದೆ. ದಿವಾಳಿಯಾಗುತ್ತಿರುವ ಕಾಂಗ್ರೆಸ್ ಸರ್ಕಾರದ ಇನ್ನು ಏನೆಲ್ಲ ಕರ್ಮಕಾಂಡಗಳನ್ನು ಜನಸಾಮಾನ್ಯರು ನೋಡಬೇಕು, ಎದುರಿಸಬೇಕು ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಇದೇ ರೀತಿ ಮುಂದುವರೆದರೆ ಮುಂದೆ ಏನು ಗ್ರಹಚಾರ ಕಾದಿದ್ಯೋ ಎಂದು ಜನರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.