ಕೇರಳದಲ್ಲೊಂದು ರಣಭೀಕರ ಹತ್ಯಾಕಾಂಡ!;ತಾಯಿ,ತಮ್ಮ, ಅಜ್ಜಿ,ಚಿಕ್ಕಪ್ಪ ಮತ್ತು ಪ್ರೇಯಸಿಯನ್ನು ಕೊಚ್ಚಿ ಕೊಂದ ಪಾಗಲ್ ಪ್ರೇಮಿ!

  • 26 Feb 2025 09:53:13 AM

ಕೇರಳ: ಈ ಆಧುನಿಕ ಯುಗದಲ್ಲಿ ಪ್ರೀತಿ ಅನ್ನೋ ಸಂಬಂಧ ತನ್ನ ಅರ್ಥ, ಮೌಲ್ಯ ಎರಡನ್ನೂ ಕಳೆದುಕೊಳ್ಳುತ್ತಿದೆ. ತಾನು ಪ್ರೀತಿಸಿದ ಯುವತಿ ಸಿಗದಿದ್ದರೆ ಹತ್ಯೆ ಮಾಡಿ ಸೇಡು ತೀರಿಸಿಕೊಳ್ಳುವ ಪ್ರೀತಿಯ ಜಾಯಮಾನದಲ್ಲಿ ನಾವಿದ್ದೇವೆ. ಜೊತೆಗೆ ಯುವತರುಣರು ಮಾದಕ ವ್ಯಸನಕ್ಕೆ ಬಲಿಯಾಗಿ ತಮ್ಮ ಅಮೂಲ್ಯ ಭವಿಷ್ಯವನ್ನು ಹಾಳು ಮಾಡಿಕೊಳ್ಳುತ್ತಿರುವುದಲ್ಲದೆ ತನ್ನವರನ್ನೂ ಯಮಲೋಕಕ್ಕೆ ದೂಡುತ್ತಿರುವ ದುರಂತ ಸನ್ನಿವೇಶಗಳು ಎದುರಾಗುತ್ತಿದೆ. ಇದೀಗ ಕೇರಳದಲ್ಲಿ ನಡೆದ ಭೀಕರ ಹತ್ಯೆ ಪ್ರಕರಣ ಬೆಚ್ಚಿ ಬೀಳಿಸಿದೆ. 

 

ಪ್ರೇಯಸಿ ಸಹಿತ ತನ್ನವರನ್ನೂ ಕೊಚ್ಚಿ ಕೊಲೆ ಮಾಡಿದ ಸೈಕೋ ಕಿಲ್ಲರ್...!!

 

ಯುವಕನೋರ್ವ ಸಾಮೂಹಿಕವಾಗಿ ನಡೆಸಿದ ಹತ್ಯೆ ಪ್ರಕರಣ ಆತಂಕದ ವಾತಾವರಣ ಸೃಷ್ಟಿ ಮಾಡಿದೆ. ಯುವಕನೋರ್ವ ಐವರು ಸಂಬಂಧಿಕರ ಜೊತೆಗೆ ತನ್ನ ಪ್ರೇಯಸಿಯನ್ನೂ ಕೊಚ್ಚಿ ಕೊಲೆ ಮಾಡಿರುವ ಭೀಕರ ಘಟನೆ ಕೇರಳದ ವೆಂಜರಮೂಡಿನಲ್ಲಿ ನಡೆದಿದೆ. ಇಪ್ಪತ್ತಮೂರು ವರ್ಷದ ಅಫಾನ್ ಕೊಲೆ ಮಾಡಿದ ಆರೋಪಿ. ಈತನೇ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಆರೋಪಿಯ ಅಜ್ಜಿ ಸಲ್ಮಾ ಬೀವಿ, ತಂದೆಯ ಸಹೋದರ ಲತೀಫ್, ಅವರ ಪತ್ನಿ ಶಾಹೀದಾ, ತನ್ನ ಸಹೋದರ ಅಪ್ಸಾನ್ ಮತ್ತು ಪ್ರೇಯಸಿ ಫರ್ಸಾನ ಮೃತ ದುರ್ದೈವಿಗಳು. ಆರೋಪಿಯ ತಾಯಿ ಶಮೀನಾರಿಗೆ ಹಲ್ಲೆಯಿಂದ ಗಂಭೀರವಾಗಿ ಗಾಯವಾಗಿದ್ದು ತಿರುವನಂತಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 

 

ಯುವಕ ಸಾಮೂಹಿಕ ಹತ್ಯೆಗೈಯ್ಯಲು ಕಾರಣವೇನು..?

 

ಆರೋಪಿ ಅಫಾನ್ ತನ್ನ ತಂದೆಯೊಂದಿಗೆ ವಿಸಿಟಿಂಗ್ ವೀಸಾದಲ್ಲಿ ವಿದೇಶದಲ್ಲಿದ್ದ. ಇತ್ತೀಚೆಗಷ್ಟೇ ಕೇರಳಕ್ಕೆ ಬಂದಿದ್ದ. ಈತನ ತಾಯಿ ಶಮೀನಾ ಕ್ಯಾನ್ಸರ್ ಗೆ ಚಿಕಿತ್ಸೆ ಪಡೆಯುತ್ತಿದ್ದರು. ಆರೋಪಿ ಡ್ರಗ್ಸ್ ಪ್ರಭಾವಕ್ಕೆ ಒಳಗಾಗಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

 

ಅಲ್ಲದೆ ಈತ ಅನೇಕ ಜನರಿಂದ ಸಾಲ ಪಡೆದಿದ್ದ. ಆರ್ಥಿಕ ತೊಂದರೆಗಳು ಅವನ ಕುಟುಂಬವನ್ನು ಆಗಾಗ ಬಾಧಿಸುತ್ತಿತ್ತು ಎಂದು ನೆರೆಹೊರೆಯವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮನೆಯವರಿಂದಲೂ ಆತ ಹಣ ಕೇಳಿದ್ದ ಆದರೆ ಸಿಕ್ಕಿರಲಿಲ್ಲ. ಗೆಳತಿಯನ್ನೂ ಮನೆಗೆ ಕರೆಸಿದ್ದ‌‌. ಇದು ಮನೆಯವರಿಗೆ ಇಷ್ಟವಾಗಲಿಲ್ಲ. ಆದರೆ ಹಣಕಾಸಿನ ಸಮಸ್ಯೆಯಿಂದ ಮಾನಸಿಕವಾಗಿ ಕುಗ್ಗಿದ್ದ ಈತ ಎಲ್ಲರನ್ನೂ ಹತ್ಯೆ ಮಾಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.