ಕೊಯಂಬತ್ತೂರು,ಫೆಬ್ರವರಿ 26: ಮಹಾಶಿವರಾತ್ರಿ ಪ್ರಯುಕ್ತ ತಮಿಳುನಾಡಿನ ಕೊಯಂಬತ್ತೂರಿನ ಈಶಾ ಫೌಂಡೇಶನ್ ನಲ್ಲಿ ಏರ್ಪಡಿಸಿದ್ದ ಶಿವರಾತ್ರಿಯ ವಿಶೇಷ ಕಾರ್ಯಕ್ರಮದಲ್ಲಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಭಾಗವಹಿಸಿದ್ದಾರೆ.
ಈಶಾ ಫೌಂಡೇಶನ್ ಸಂಸ್ಥಾಪಕ ಹಾಗೂ ಆಧ್ಯಾತ್ಮಿಕ ಗುರು ಸದ್ಗುರು ಜಗ್ಗಿ ವಾಸುದೇವ್ ಅವರ ನೇತೃತ್ವದಲ್ಲಿ, ದಕ್ಷಿಣದ ಕೈಲಾಸವೆಂದು ಖ್ಯಾತಿ ಪಡೆದ ವೆಳ್ಳಿಯಂಗಿರಿ ತಪ್ಪಲಿನ ಈಶ ಯೋಗ ಕೇಂದ್ರದಲ್ಲಿ ಏರ್ಪಡಿಸಲಾದ ಅಹೋರಾತ್ರಿ ಮಹಾಶಿವರಾತ್ರಿ ಉತ್ಸವದಲ್ಲಿ ಪಾಲ್ಗೊಂಡ ಇವರು ಧ್ಯಾನ ಲಿಂಗ ಮತ್ತು ಲಿಂಗ ಭೈರವಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.
ದೇಶ-ವಿದೇಶಗಳಿಂದಲೂ ಸಹ ಹೆಚ್ಚಿನ ಸಂಖ್ಯೆಯಲ್ಲಿ ಶಿವಭಕ್ತರು ಪಾಲ್ಗೊಂಡಿದ್ದ ಈ ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರಾದ ಅಮಿತ್ ಶಾ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಹಾಗೆಯೇ ಕರ್ನಾಟಕದ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಪಂಜಾಬ್ ರಾಜ್ಯಪಾಲ ಗುಲಾಬ್ ಚಂದ್ ಕಟಾರಿಯಾ, ಒರಿಸ್ಸಾ ರಾಜ್ಯಪಾಲ ಡಾ.ಹರಿಬಾಬು ಕಂಬಂಪಾಟಿ, ಕೇಂದ್ರ ಮಾಹಿತಿ ಮತ್ತು ಪ್ರಸಾರ ಮತ್ತು ಸಂಸದೀಯ ವ್ಯವಹಾರ ಖಾತೆಯ ರಾಜ್ಯ ಸಚಿವರಾದ ಎಲ್. ಮುರುಗನ್ ಭಾಗವಹಿಸಿದರು.
ಈ ಶುಭವೇಳೆಯಲ್ಲಿ ಸಂಸದ ಕ್ಯಾ. ಚೌಟ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಸದ್ಗುರು ಜಗ್ಗಿ ವಾಸುದೇವ್ ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡರು.ಈಶ ಫೌಂಡೇಶನ್‌ನಲ್ಲಿ ಮಹಾ ಶಿವರಾತ್ರಿ ಆಚರಣೆಯಲ್ಲಿ ಭಾಗವಹಿಸುವುದು ನಿಜವಾಗಿಯೂ ಅಭೂತಪೂರ್ವ ಆಧ್ಯಾತ್ಮಿಕ ಅನುಭವವನ್ನು ನೀಡಿದೆ ಎಂದೂ ಶಿವರಾತ್ರಿ ಉತ್ಸವದಲ್ಲಿ ಭಾಗವಹಿಸಲು ನನಗೆ ಅವಕಾಶ ಸಿಕ್ಕಿರುವುದು ಮಾತ್ರವಲ್ಲದೆ ಸದ್ಗುರು ಅವರನ್ನು ಭೇಟಿಯಾಗಿ ಆಶೀರ್ವಾದ ಪಡೆಯಲು ಸಾಧ್ಯವಾದದ್ದು ತುಂಬಾ ಖುಷಿ ತಂದಿದೆ.
ಸೌಂಡ್ಸ್ ಆಫ್ ಈಶ , ಪ್ರಾಜೆಕ್ಟ್ ಸಂಸ್ಕೃತಿ, ಈಶಾ ಗುರುಕುಲಂನ ವಿದ್ಯಾರ್ಥಿಗಳ , ಅಜಯ್ - ಅತುಲ್ ಮತ್ತು ಇತರ ಪ್ರಸಿದ್ಧ ಪ್ರದರ್ಶಕರಿಂದ ಸಂಗೀತ, ನೃತ್ಯ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಮಧ್ಯರಾತ್ರಿ ಮಹಾಮಂತ್ರ ದೀಕ್ಷೆ, ಶಂಭೋ ಧ್ಯಾನ ಮುಂತ್ದಕರ್ಯಕ್ರಮಗಳು ಶಿವರಾತ್ರಿ ಜಾಗರಣೆಯಲ್ಲಿ ಚೈತನ್ಯ ಶೀಲರಾಗುವಂತೆ ಮಾಡಿತು.
ಸದ್ಗುರು ಅವರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುತ್ತಿರುವ ಈ ಯೋಗ ಕೇಂದ್ರವು ಸನಾತನ ಹಿಂದೂ ಧರ್ಮದ ತತ್ವಗಳನ್ನು ವಿಶ್ವದ ಮೂಲೆಮೂಲೆಗಳಿಗೆ ಪಸರಿಸುವ ಮಹತ್ತರವಾದ ಕಾರ್ಯ ಮಾಡುತ್ತಿದೆ. ಅದರ ಜೊತೆಗೆ, ಮತಾಂತರದ ವಿರುದ್ಧ ಜಾಗೃತಿ ಮೂಡಿಸುವುದು ಅಲ್ಲದೆ ಧರ್ಮ ಶಿಕ್ಷಣವನ್ನು ನೀಡುತ್ತಿದೆ. ಹಾಗೆಯೇ ಜನರಿಗೆ ಯೋಗ ಮತ್ತು ಆಧ್ಯಾತ್ಮಿಕತೆಯ ಮಹತ್ವದ ಕುರಿತು ತಿಳಿಸುತ್ತಿದೆ, ಎಂದು ಕ್ಯಾ. ಚೌಟ ಅವರು ಹೇಳಿದ್ದಾರೆ.