ಮಂಗಳೂರು, ಫೆಬ್ರವರಿ 28: ಬಂಟ್ವಾಳ ತಾಲೂಕಿನ ಫರಂಗಿಪೇಟೆಯ ನಿವಾಸಿ ದ್ವಿತೀಯ ಪಿಯು ವಿದ್ಯಾರ್ಥಿಯಾದ ದಿಗಂತ್ ಇತ್ತೀಚೆಗೆ ನಾಪತ್ತೆಯಾಗಿದ್ದಾನೆ. ಹಲವು ದಿನಗಳು ಕಳೆದರೂ ಯಾವುದೇ ದಿಗಂತ್ ನ ಕುರಿತಾಗಿ ಯಾವುದೇ ಸುಳಿವು ದೊರಕಿಲ್ಲ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಯಾವುದೇ ರೀತಿಯ ಸ್ಪಷ್ಟ ಮಾಹಿತಿ ನೀಡದೇ ಇರುವುದು ವಿವಿಧ ಅನುಮಾನಗಳಿಗೆ ಕಾರಣವನ್ನು ಉಂಟುಮಾಡಿದೆ.
ಈ ಹಿನ್ನೆಲೆಯಲ್ಲಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಮಂಗಳೂರು ಜಿಲ್ಲಾ ಘಟಕದ ಪ್ರತಿನಿಧಿಗಳು ಮಂಗಳೂರು ಜಿಲ್ಲಾಧಿಕಾರಿ ಕಚೇರಿಗೆ ಹೋಗಿ, ದಿಗಂತ್ ನಾಪತ್ತೆಯ ಕುರಿತಂತೆ ತನಿಖೆಯನ್ನು ಚುರುಕುಗೊಳಿಸಿ ಪಾರದರ್ಶಕವಾಗಿ ನಡೆಸುವಂತೆ ಮನವಿ ಸಲ್ಲಿಸಿದರು. ಹಾಗೆಯೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರನ್ನು ಭೇಟಿ ಮಾಡಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶೀಘ್ರ ಕ್ರಮ ಕೈಗೊಳ್ಳ ಬೇಕೆಂದೂ ನಾಪತ್ತೆಯ ಹಿಂದಿನ ನಿಜವಾದ ಸತ್ಯಾವಸ್ಥೆ ಬಯಲು ಮಾಡಬೇಕೆಂದು ಎಂದು ಒತ್ತಾಯಿಸಿದರು. ಈ ಪ್ರಕರಣದ ನಿಜಾಂಶ ಹೊರಬರಲು ಸೂಕ್ತ ತನಿಖೆ ನಡೆಸಿ, ಶೀಘ್ರದಲ್ಲೇ ದಿಗಂತ್ ಪತ್ತೆಯಾಗಲು ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಮನವಿಯಲ್ಲಿ ತಿಳಿಸಿದರು.