ಮಂಗಳೂರು| ಬಂಟ್ವಾಳದಲ್ಲಿ‌‌ ಶಿಕ್ಷಣ ಇಲಾಖೆ ಎಡವಟ್ಟು!;SSLC ವಿದ್ಯಾರ್ಥಿಗಳಿಗೆ ಗಣಿತದ ಬದಲು ಇಂಗ್ಲೀಷ್ ಪೇಪರ್ ಹಂಚಿಕೆ!

  • 01 Mar 2025 11:15:46 AM

ಮಂಗಳೂರು: ಶಾಲೆ ಕಲಿಯುವ ವಿದ್ಯಾರ್ಥಿಗಳಿಗೆ ಶಿಕ್ಷಣ ಅನ್ನುವಂತದ್ದು ಭವಿಷ್ಯವನ್ನು ಸರಿ ದಾರಿಯಲ್ಲಿ ನಡೆಯಲು ಪ್ರೇರಕವಾಗುವ ಮತ್ತು ಪೂರಕವಾಗುವ ಮಹತ್ತರವಾದ ಹಂತ. ಅದರಲ್ಲೂ ಹತ್ತನೇ ತರಗತಿ ವಿದ್ಯಾರ್ಥಿಗಳಿಗಂತೂ ಎಸ್.ಎಸ್.ಎಲ್‌‌.ಸಿ ಅಂತಿಮ ಪರೀಕ್ಷೆ ಜೀವನದ ದಿಕ್ಕನ್ನೇ ಬದಲಾಯಿಸುವ ಒಂದು ಮಹತ್ವವಾದ ಘಟ್ಟವಾಗಿದೆ. ಆದರೆ ಅದೇ ಪರೀಕ್ಷೆಯಲ್ಲಿ ಎಡವಟ್ಟಾದರೆ ಹೇಗೆ...? ಹೀಗೊಂದು ಅಪರೂಪದ ಘಟನೆ ಬುದ್ಧಿವಂತರ ಜಿಲ್ಲೆ ಮಂಗಳೂರಿನಲ್ಲೇ ನಡೆದಿದೆ.

 

ಹತ್ತನೇ ಕ್ಲಾಸ್ ಎಕ್ಸಾಂನಲ್ಲಿ ಎಡವಟ್ಟು ಮಾಡಿದ ಶಿಕ್ಷಕರು..!

 

ಎಸ್.ಎಸ್.ಎಲ್.ಸಿ ಪೂರ್ವ ಸಿದ್ಧತೆ ಪರೀಕ್ಷೆಯಲ್ಲಿ ಶಿಕ್ಷಕರೇ ಎಡವಟ್ಟು ಮಾಡಿ ವಿದ್ಯಾರ್ಥಿಗಳು ತಬ್ಬಿಬ್ಬಾದ ಘಟನೆ ದ.ಕ ಜಿಲ್ಲೆಯ ಬಂಟ್ವಾಳದಲ್ಲಿ ನಡೆದಿದೆ. ಇಂಗ್ಲೀಷ್ ಮೀಡಿಯಂ ಪ್ರೌಢಶಾಲೆಯ ಐವತ್ತು ವಿದ್ಯಾರ್ಥಿಗಳಿಗೆ ಶಿಕ್ಷಕರು ಬಿಗ್ ಶಾಕ್ ನೀಡಿದ್ದಾರೆ. ಪರೀಕ್ಷೆ ನಡೆಯುವ ಪ್ರಕ್ರಿಯೆ ಪರಿಪೂರ್ಣವಾಗಿರಬೇಕು. ಮತ್ತು ವಿದ್ಯಾರ್ಥಿಗಳಿಗೆ ಅದರ ಗಂಭೀರತೆಯನ್ನು ಅರ್ಥ ಮಾಡಿಸುವುದು ಕೂಡಾ ಶಿಕ್ಷಕರ ಜವಾಬ್ದಾರಿ. ಆದರೆ ಶಿಕ್ಷಕರು ಪರೀಕ್ಷೆ ನಡೆಯುವ ಪ್ರಶ್ನೆ ಪತ್ರಿಕೆ ನೀಡುವ ಬದಲು ಬೇರೊಂದು ಪ್ರಶ್ನೆ ಪತ್ರಿಕೆ ನೀಡಿ ಫಜೀತಿಗೆ ಸಿಲುಕಿದ್ದಾರೆ.‌ ಶಿಕ್ಷಣಾಧಿಕಾರಿ ಕೂಡಾ ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದು ತಪ್ಪು ಮಾಡಿದ ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. 

 

ಗಣಿತ ಪ್ರಶ್ನೆ ಪತ್ರಿಕೆ ನೀಡುವ ಬದಲು ಇಂಗ್ಲೀಷ್ ಪ್ರಶ್ನೆ ಪತ್ರಿಕೆ ಕೊಟ್ಟ ಟೀಚರ್ಸ್..!!

 

ಹೌದು. ಗುರುವಾರ ನಡೆಯಬೇಕಿದ್ದ ಗಣಿತ ಪ್ರಶ್ನೆ ಪತ್ರಿಕೆ ಬದಲು ಶುಕ್ರವಾರ ನಡೆಯಬೇಕಿದ್ದ ದ್ವಿತೀಯ ಭಾಷೆ ಇಂಗ್ಲೀಷ್ ಪ್ರಶ್ನೆ ಪತ್ರಿಕೆ ನೀಡಿ ಶಾಕ್ ಕೊಟ್ಟಿದ್ದಾರೆ. ಬೆಳಿಗ್ಗೆ ಒಂಭತ್ತು ನಲ್ವತ್ತೈದರ ವೇಳೆಗೆ ಎಡವಟ್ಟು ಗಮನಿಸಿದ ವಿದ್ಯಾರ್ಥಿಗಳು ಶಿಕ್ಷಕರಿಗೆ ಮಾಹಿತಿ ನೀಡಿದ್ದಾರೆ. ಅಲ್ಲದೆ ಈ ಎಡವಟ್ಟಿನ ಬಗ್ಗೆ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಡಿಡಿಪಿಐಗೆ ಮಾಹಿತಿ ನೀಡಿ ಬಳಿಕ ಗಣಿತ ಪರೀಕ್ಷೆ ನಡೆಸಿ ಮಧ್ಯಾಹ್ನದ ವೇಳೆಗೆ ಪರೀಕ್ಷೆ ನಡೆಸಲಾಯಿತು. ಇಂತಹ ಸಂದರ್ಭ ಶಿಕ್ಷಕರು ಸೂಕ್ಷ್ಮತೆಯಿಂದ ಕರ್ತವ್ಯ ನಿರ್ವಹಿಸುವುದು ಜವಾಬ್ದಾರಿ. ಇಲ್ಲವಾದಲ್ಲಿ ಅದು ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀರಬಹುದು.