ಉಡುಪಿ| ಮಲ್ಪೆ ಆಳ ಸಮುದ್ರದಲ್ಲಿ ವಿದೇಶಿ ಬೋಟ್ ಪತ್ತೆ!;ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟ ಬೋಟ್!

  • 01 Mar 2025 12:03:03 PM

ಉಡುಪಿ ಮಲ್ಪೆ ಅನೇಕರು ಇಷ್ಟಪಡುವ ಪ್ರವಾಸಿ ತಾಣವಾಗಿದೆ. ಇಲ್ಲಿ ಬೋಟ್ ನಲ್ಲಿ ಕೂಡಾ ಪ್ರವಾಸಿಗರು ಪ್ರಯಾಣಿಸುತ್ತಾರೆ. ಸಮುದ್ರದಲ್ಲಿ ಅದೆಷ್ಟೋ ಅಪರೂಪದ ವಸ್ತುಗಳು ಕಾಣಸಿಗುತ್ತಿರುತ್ತದೆ.‌ ಆದರೆ ಇದೀಗ ಮಲ್ಪೆಯಲ್ಲಿ ಅನುಮಾನಸ್ಪದ ಬೋಟ್ ಒಂದು ಪತ್ತೆಯಾಗಿದ್ದು ಇದು ವಿದೇಶದಿಂದ ಬಂದಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.

 

ಮಲ್ಪೆಯಲ್ಲಿ ಪತ್ತೆಯಾಯ್ತು ಓಮನ್ ಮೂಲದ ಮೀನುಗಾರಿಕಾ ಬೋಟ್..!

 

ಉಡುಪಿಯ ಮಲ್ಪೆ ಆಳ ಸಮುದ್ರದಲ್ಲಿ ಅನುಮಾನಸ್ಪದ ವಿದೇಶಿ ಬೋಟೊಂದು ಪತ್ತೆಯಾಗಿದೆ. ಮಲ್ಪೆಯ ಸೈಂಟ್ ಮೇರಿಸ್ ದ್ವೀಪದಲ್ಲಿ ಓಮನ್ ಮೂಲದ ಮೀನುಗಾರಿಕಾ ಬೋಟ್ ಪತ್ತೆಯಾಗಿದ್ದು, ಇದು ಓಮನ್ ಹಾರ್ಬರ್ನಿಂದ ತಪ್ಪಿಸಿಕೊಂಡು ಭಾರತೀಯ ಸಮುದ್ರಕ್ಕೆ ಬಂದಿದ್ದ ಬೋಟ್ ಎಂಬುದು ತಿಳಿದುಬಂದಿದೆ.

 

ಬೋಟ್ನಲ್ಲಿ ತಮಿಳುನಾಡು ಮೂಲದ ಮೀನುಗಾರರು ಪತ್ತೆಯಾಗಿದ್ದಾರೆ. ಓಮನ್ ಮೂಲದ ಬೋಟ್ನಲ್ಲಿ ಮೀನುಗಾರಿಕೆ ವೃತ್ತಿ ನಡೆಸುತ್ತಿದ್ದ ತಮಿಳುನಾಡು ಮೂಲದ ತಂಡವನ್ನು ವೇತನ ಹಾಗೂ ಆಹಾರ ನೀಡದೆ ಓಮನ್ ಬೋಟ್ ಮಾಲೀಕ ಸತಾಯಿಸುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ. 

 

ಮೀನುಗಾರರ ಪಾಸ್‌ಪೋರ್ಟ್ ವಶಕ್ಕೆ ಪಡೆದು ಚಿತ್ರಹಿಂಸೆ..!

 

ಓಮನ್ ನಲ್ಲಿ ಬೋಟ್ ಮಾಲೀಕ ಮೀನುಗಾರರಿಗೆ ಪಾಸ್‌ಪೋರ್ಟ್ ವಶಕ್ಕೆ ಪಡೆದು ಚಿತ್ರಹಿಂಸೆ ನೀಡುತ್ತಿದ್ದ. ಇದೇ ಕಾರಣಕ್ಕೆ ಅಲ್ಲಿಂದ ಮೀನುಗಾರರು ತಪ್ಪಿಸಿಕೊಂಡು ಬಂದಿದ್ದಾರೆ. ಸಮುದ್ರ ಮಾರ್ಗದಲ್ಲಿ ನಾಲ್ಕು ಸಾವಿರ ಕಿಲೋ ಕ್ರಮಿಸಿ ಭಾರತದ ಸಮುದ್ರ ತೀರಕ್ಕೆ ಬಂದಿದ್ದರು.

 

ಆದರೆ ದುರಾದೃಷ್ಟವಶಾತ್ ಡೀಸೆಲ್ ಖಾಲಿಯಾಗಿ ಹಣ, ಆಹಾರವಿಲ್ಲದೆ ಅದರಲ್ಲಿದ್ದವರು ಪರದಾಡಿದ್ದಾರೆ. ಬಳಿಕ ಮಲ್ಪೆ ಸೈಂಟ್ ಮೇರಿಸ್ ದ್ವೀಪದಲ್ಲಿ ಸ್ಥಳೀಯ ಮೀನುಗಾರರಿಗೆ ವಿದೇಶಿ ಬೋಟ್ ಪತ್ತೆಯಾಗಿದೆ. ಸ್ಥಳೀಯ ಮೀನುಗಾರರು ಕೋಸ್ಟ್ ಗಾರ್ಡ್ಗೆ ಮಾಹಿತಿ ರವಾನಿಸಿದ್ದಾರೆ. ಮೀನುಗಾರರು ಜೀವ ಭಯದಿಂದ ಎಸ್ಕೇಪ್ ಆಗಿ ಬಂದಿದ್ದಾರೆ ಎಂಬುವುದು ಮೇಲ್ನೋಟಕ್ಕೆ ತಿಳಿದುಬಂದಿದೆ.