ಬೆಂಗಳೂರು: ರಾಜ್ಯದಲ್ಲಿ ಕಳ್ಳತನ, ಕೊಲೆ, ಸುಲಿಗೆ, ಅತ್ಯಾಚಾರದಂತಹ ಪ್ರಕರಣಗಳು ಹೆಚ್ಚಾಗುತ್ತಲೇ ಇದೆ. ಆರೋಪಿಗಳಿಗೆ ಕಾನೂನಿನ ಭಯವೇ ಇಲ್ಲದಂತಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕೂಡಾ ಸಂಪೂರ್ಣವಾಗಿ ಹದಗೆಟ್ಟಿದೆ. ಖದೀಮರು ತಲೆಮರೆಸಿಕೊಂಡು ಆರಾಮವಾಗಿ ಹೊರಗೆ ಓಡಾಡುತ್ತಿರುತ್ತಾರೆ. ಇದೀಗ ನೂರ ನಾಲ್ಕು ಪ್ರಕರಣಗಳಲ್ಲಿ ಭಾಗಿಯಾಗಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ಖದೀಮರು ಕೊನೆಗೂ ಅಂದರ್ ಆಗಿದ್ದಾರೆ.
ಒಂದಲ್ಲ, ಎರಡಲ್ಲ..ಇವರ ಮೇಲಿತ್ತು ಬರೋಬ್ಬರಿ 104 ಪ್ರಕರಣಗಳು..!
ಸರಗಳ್ಳತನ, ರೌಡಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದು, ಆಗಾಗ ಆಶ್ರಯ ಸ್ಥಳಗಳನ್ನು ಬದಲಿಸಿ ಪೊಲೀಸರಿಗೆ ಯಾಮಾರಿಸುತ್ತಿದ್ದ ಇಬ್ಬರು ಕುಖ್ಯಾತ ಆರೋಪಿಗಳನ್ನು ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬನ್ನೇರುಘಟ್ಟ ನಿವಾಸಿ ಮೊಹಮ್ಮದ್ ಜಬೀವುದ್ದೀನ್ ಅಲಿಯಾಸ್ ತಬ್ರೇಜ್ ಹಾಗೂ ಜಯನಗರ ನಿವಾಸಿ ಮೊಹಮ್ಮದ್ ಮೆಹತಾಬ್ ಬಂಧಿತ ಆರೋಪಿಗಳಾಗಿದ್ದಾರೆ.
ಒಬ್ಬನ ವಿರುದ್ಧ 73 ಪ್ರಕರಣಗಳು ದಾಖಲಾಗಿದ್ದರೆ ಮತ್ತೊಬ್ಬನ ಮೇಲೆ 31 ಪ್ರಕರಣಗಳು ದಾಖಲಾಗಿತ್ತು. ಕೊನೆಗೂ ಇವರನ್ನು ಹಿಡಿಯುವಲ್ಲಿ ಜಯನಗರ ಪೊಲೀಸರು ಯಶಸ್ವಿಯಾಗಿದ್ದಾರೆ.
ಇವರು ಪೊಲೀಸರನ್ನು ಯಾಮಾರಿಸುತ್ತಿದ್ದದ್ದು ಹೇಗೆ Yಗೊತ್ತಾ...?
ಕಳ್ಳತನ ಮತ್ತು ರೌಡಿ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದ ಇವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ನ್ಯಾಯಾಂಗ ಬಂಧನವೂ ಆಗಿತ್ತು. ಆನಂತರ ಜಾಮೀನಿನ ಮುಖೇನ ಇವರಿಬ್ಬರು ಹೊರಗೆ ಬಂದು ತಮ್ಮ ಚಾಳಿಯನ್ನು ಮತ್ತೆ ಮುಂದುವರೆಸಿದ್ದರು. ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡು ಒಂದು ಮನೆಯಲ್ಲೂ ಸ್ಥಿರವಾಗಿ ನಿಲ್ಲದೆ ಆಟ ಆಡಿಸುತ್ತಿದ್ದರು. ಜಾಮೀನು ರಹಿತ ಬಂಧನ ವಾರೆಂಟ್ ಕೂಡಾ ಕಳುಹಿಸಲಾಗಿತ್ತು. ಇದೀಗ ಇನ್ಸ್ಪೆಕ್ಟರ್ ದೀಪಕ್ ಅವರ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.