ಕಾಪು: ಸ್ವರ್ಣ ಗದ್ದುಗೆಯಲ್ಲಿ ಇಂದು ಶ್ರೀ ಮಾರಿಯಮ್ಮ, ಸ್ವರ್ಣಪೀಠದಲ್ಲಿ ಉಚ್ಚಂಗಿ ದೇವಿ ಪ್ರತಿಷ್ಠಾಪನೆ!

  • 02 Mar 2025 01:09:32 PM

ಕಾಪು ಮಾರ್ಚ್ 2: ಕಾಪು ಮಾರಿಗುಡಿ ದೇವಸ್ಥಾನದಲ್ಲಿ ಇಂದು ಶ್ರೀ ಮಾರಿಯಮ್ಮ ಮತ್ತು ಉಚ್ಚಂಗಿ ದೇವಿಯ ಮಹಾಸ್ವರ್ಣಪೀಠ ಪ್ರತಿಷ್ಠಾ ಕಾರ್ಯಕ್ರಮ ನಡೆಯಲಿದೆ. ಕೊರಂಗ್ರಪಾಡಿ ವೇ| ಕೆ. ಜಿ. ರಾಘವೇಂದ್ರ ತಂತ್ರಿಗಳ ಮಾರ್ಗದರ್ಶನದಲ್ಲಿ, ಪ್ರಧಾನ ತಂತ್ರಿ ಕೆ. ಪಿ. ಕುಮಾರಗುರು ತಂತ್ರಿಗಳ ನೇತೃತ್ವದಲ್ಲಿ ಈ ಪವಿತ್ರ ಧಾರ್ಮಿಕ ವಿಧಿಗಳು ನಡೆಯಲಿದೆ. ಭದ್ರಕಾಳೀ ಕುರುಜಿತರ್ಪಣ, ಚಂಡಿಕಾ ದಳಾನುಷ್ಟಾನ, ದಶವಿಧ ಲಿಪಿದೇವತಾ ಆರಾಧನೆ ಸೇರಿದಂತೆ ವಿವಿಧ ಪೂಜೆಗಳು ನಡೆಯುತ್ತವೆ.

 

ಸಂಜೆ 6 ಕ್ಕೆ ಮಹಾದೇವಿ ಪ್ರೌಢಶಾಲೆ ಮೈದಾನದಲ್ಲಿ ಧಾರ್ಮಿಕ ಸಭೆ ಆಯೋಜಿಸಲಾಗಿದೆ. ಈ ಸಭೆಯಲ್ಲಿ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ವಜ್ರದೇಹಿ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ. ವೈ. ವಿಜಯೇಂದ್ರ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ. ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಡಾ| ಕೆ. ಪ್ರಕಾಶ್ ಶೆಟ್ಟಿ ಸಭೆಯ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.

 

ಈ ವೇಳೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯಲಿದ್ದು, ಸಂಜೆ 4 ಗಂಟೆಗೆ ಪಟ್ಲ ಸತೀಶ್ ಶೆಟ್ಟಿ ಅವರ ತಂಡದಿಂದ ಶ್ರೀ ದೇವಿ ಮಹಾತ್ಮೆ ಯಕ್ಷಗಾನ ಮತ್ತು ರಾತ್ರಿ 8 ಗಂಟೆಗೆ ಕಲಾವತಿ ದಯಾನಂದ್ ಬಳಗದವರಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.