ಕಾಪು: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾಪು ತಾಲೂಕಿನ ಹೊಸ ಮಾರಿಗುಡಿ ಬ್ರಹ್ಮಕಲಶೋತ್ಸವದ ಅಮ್ಮನವರ ಗದ್ದುಗೆ ಪ್ರತಿಷ್ಠಾಪನ ಕಾರ್ಯಕ್ರಮದಲ್ಲಿ ಭಾಗಿಯಾದರು. ಈ ಸಂದರ್ಭದಲ್ಲಿ ಅವರು ಅವರ ಪತ್ನಿ ಉಷಾ ಹೆಸರಿನಲ್ಲಿ ₹9,99,999 ಮೌಲ್ಯದ ಚಿನ್ನದ ಕಲಶ ಸೇವೆಯನ್ನು ಅರ್ಪಿಸಿದರು. ಕಾಪು ಕ್ಷೇತ್ರದ ಬಿಜೆಪಿ ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಡಿಕೆ ಶಿವಕುಮಾರ್ ಅವರಿಗೆ ಸನ್ಮಾನಿಸಿದರು. ಮಾರಿಯಮ್ಮನ ಪ್ರಥಮ ಪ್ರಸಾದವನ್ನು ಅವರಿಗೆ ನೀಡುವುದರ ಮೂಲಕ ಗೌರವಿಸಲಾಯಿತು.
ನಾನು ಭಕ್ತನಾಗಿ ದೇವಸ್ಥಾನಕ್ಕೆ ಆಗಮಿಸಿದ್ದೇನೆ ಡಿಸಿಎಂ ಆಗಿ ಅಲ್ಲ ಎಂದು ಅವರು ತಿಳಿಸಿದ್ದಾರೆ. "ಭಕ್ತನ ಭಗವಂತನ ವ್ಯವಹಾರ ನಡೆಯುವ ಸ್ಥಳ ದೇವಾಲಯ. ನಾಡದೇವತೆ ಚಾಮುಂಡೇಶ್ವರಿಗೂ ಈ ಕ್ಷೇತ್ರಕ್ಕೂ ಐತಿಹಾಸಿಕ ನಂಟು ಇದೆ. ಕಾಪು ಎಂದರೆ ರಕ್ಷಣಾ ಸ್ಥಳವೆಂದು ಕೇಳಿಬಂದಿದೆ" ಎಂದು ಅವರು ಹೇಳಿದರು. ಧರ್ಮ ಯಾವುದಾದರೂ ತತ್ವ ಒಂದೇ ಭಕ್ತಿಯಲ್ಲಿ ಶ್ರದ್ದೆ ಇರಬೇಕು ಎಂದು ತಿಳಿಸಿದ್ದಾರೆ.
ದೇವರು ವರ ಅಥವಾ ಶಾಪ ನೀಡುವುದಿಲ್ಲ, ಅವಕಾಶ ಮಾತ್ರ ನೀಡುತ್ತಾನೆ. ನಮ್ಮ ಧರ್ಮವನ್ನು ನಾವು ಕಾಪಾಡಬೇಕು ಎಂದೂ ದೇವಾಲಯಗಳಿಗೆ ಸೇವೆ ಮಾಡುವವರಿಗೆ ದೇವರ ಆಶೀರ್ವಾದ ಸದಾ ಇರುತ್ತದೆ ಎಂದು ಹೇಳಿದ್ದಾರೆ.
ಭಕ್ತಿ ಭಾವ ಇಲ್ಲದೆ ಮನುಷ್ಯ ಬದುಕಲು ಸಾಧ್ಯವಿಲ್ಲ. ಇಂದು ದೇವರ ದರ್ಶನ ಮಾಡುವ ಭಾಗ್ಯ ನನಗೆ ದೊರೆಕಿದೆ ಭವಿಷ್ಯದಲ್ಲಿ ತಮ್ಮ ಪತ್ನಿ ಮತ್ತು ಕುಟುಂಬದವರನ್ನೂ ಈ ಕ್ಷೇತ್ರಕ್ಕೆ ಕಳುಹಿಸುವುದಾಗಿ ಅವರು ಹೇಳಿದರು.