ಕೌಟುಂಬಿಕ ಕಲಹಕ್ಕೆ ಬಲಿಯಾದ ಮೂರು ಜೀವಗಳು...!! ಎಕ್ಸ್‌ಪ್ರೆಸ್‌ ರೈಲು ಹರಿದು ನುಚ್ಚುನೂರಾಯ್ತು ದೇಹ....!!

  • 03 Mar 2025 11:41:07 AM

ಕೋಟ್ಟಾಯಂ: ಕುಟುಂಬ ಎಂದ ಮೇಲೆ ಮನಸ್ತಾಪಗಳು, ಜಗಳ, ಭಿನ್ನಾಭಿಪ್ರಾಯ ಬರೋದು ಸಹಜ. ಆದರೆ ಅದೇ ತಾರಕಕ್ಕೇರಿದಾಗ ಮಾತ್ರ ಅಲ್ಲೋಲ-ಕಲ್ಲೋಲವಾಗಿ ಬಿಡುತ್ತದೆ. ಮತ್ತೊಂದು ದುರಂತಕ್ಕೆ ಅದು ಕಾರಣವಾಗಿ ಬಿಡುತ್ತದೆ. ಇಲ್ಲಿ ನಡೆದದ್ದು ಅದೇ. ಈ ಅಪರೂಪದ ಹೃದಯ ವಿದ್ರಾವಕ ಘಟನೆ ಎಂಥವರನ್ನೂ ಬೆಚ್ಚಿಬೀಳಿಸುತ್ತೆ.

 

ರೈಲಿಗೆ ತಲೆ ಕೊಟ್ಟು ಜೀವಾಂತ್ಯಗೊಳಿಸಿದ ತಾಯಿ-ಮಕ್ಕಳು...!!

 

ಕೌಟುಂಬಿಕ ಕಲಹದ ಕಾರಣದಿಂದಾಗಿ ಬೇಸರಗೊಂಡು ತಾಯಿ ಹಾಗೂ ಇಬ್ಬರು ಮಕ್ಕಳು ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಕೊಟ್ಟಾಯಂನ ಪರೋಲಿಕಲ್ ರೈಲ್ವೇ ಗೇಟ್ ಬಳಿ ನಡೆದಿದೆ. ಶೈನಿ ಕುರಿಯಾಕೋಸ್, ಅವರ ಮಕ್ಕಳಾದ ಅಲೀನಾ ಮತ್ತು ಇವಾನಾ ಆತ್ಮಹತ್ಯೆಯಿಂದ ಮೃತಪಟ್ಟ ದುರ್ದೈವಿಗಳು.

 

ಶೈನಿ ಅವರ ಪತಿ ನೋಬಿ ಎಂಬವರು ಇರಾಕ್ ನಲ್ಲಿ ತೈಲ ಕಂಪೆನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದು ಈ ದಂಪತಿಗೆ ನಿತ್ಯ ಜಗಳವಾಗುತ್ತಿತ್ತು. ಪತಿ ಊರಿಗೆ ಬಂದಾಗ ಕುಡಿದು ಶೈನಿ ಅವರ ಮೇಲೆ ಹಲ್ಲೆ ಕೂಡಾ ಮಾಡುತ್ತಿದ್ದರಂತೆ. ಈ ಕಾರಣಕ್ಕೆ ಶೈನಿ ಅವರ ತಾಯಿ ಮನೆಯಲ್ಲಿ ಬಂದು ನೆಲೆಸಿದ್ದರು ಎನ್ನಲಾಗಿದೆ.

 

ಚರ್ಚ್ ಗೆ ಹೋಗೋದಾಗಿ ಹೇಳಿ ಆತ್ಮಹತ್ಯೆಗೆ ಶರಣಾದ ಜೀವಗಳು..!

 

ಶೈನಿ ತನ್ನ ಮಕ್ಕಳೊಂದಿಗೆ ಚರ್ಚ್ ಗೆ ಹೋಗೋದಾಗಿ ಹೇಳಿ ಮನೆಯಿಂದ ಹೊರಟು ಬಂದದ್ದು ರೈಲ್ವೇ ಟ್ರ್ಯಾಕ್ ಬಳಿ. ಇಲ್ಲಿ ಒಬ್ಬರನೊಬ್ಬರು ಅಪ್ಪಿಕೊಂಡು ನಿಂತಿದ್ದು ನೀಲಂಬೂರ್ ಎಕ್ಸ್‌ಪ್ರೆಸ್‌ ನ ಲೋಕೋ ಪೈಲಟ್ ಎಷ್ಟೇ ಹಾರ್ನ್ ಮಾಡಿದ್ರೂ ಅವರು ಹಿಂದೆ ಸರಿಯಲಿಲ್ಲ.

 

ರೈಲು ಮೂವರ ಮೇಲೆ ಹರಿದು ಹೋಗಿದ್ದು ಗುರುತೇ ಸಿಗದಷ್ಟರ ಮಟ್ಟಿಗೆ ಇವರ ದೇಹ ನುಚ್ಚುನೂರಾಗಿತ್ತು. ಶೈನಿ ಬಿಎಸ್ಸಿ ಪದವೀಧರೆ ಆಗಿದ್ರೂ ಅವರನ್ನು ಕೆಲಸಕ್ಕೆ ಹೋಗಲು ಗಂಡ ಬಿಡುತ್ತಿರಲಿಲ್ಲ. ಹೀಗೆ ಗಂಡನ ಅತೀ ಹಿಂಸೆಯಿಂದ ಶೈನಿ ಅವರು ಹೈರಾಣಾಗಿದ್ದು ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ನೋಬಿ ವಿರುದ್ಧ ಕುಟುಂಬ ನ್ಯಾಯಾಲಯದಲ್ಲಿ ಹಿಂಸಾಚಾರದ ದೂರು ಮತ್ತು ವಿಚ್ಛೇದನ ಅರ್ಜಿಯನ್ನು ಸಲ್ಲಿಸಲಾಗಿದೆ.