ಆಲಪ್ಪುಳ: ನಾವು ಆಹಾರ ಸೇವಿಸುವಾಗಲೂ ಅತ್ಯಂತ ಜಾಗರೂಕತೆ ವಹಿಸಬೇಕಾಗುತ್ತದೆ. ಈ ಸಂದರ್ಭ ಆಹಾರ ಗಂಟಲಲ್ಲಿ ಸಿಕ್ಕಿಕೊಂಡು ಅಪಾಯ ಎದುರಿಸುವ ಸಂದರ್ಭವೂ ಬರುತ್ತದೆ. ಅದರಲ್ಲೂ ಮತ್ಸ್ಯಪ್ರಿಯರಾಗಿದ್ದು ಮೀನಿಲ್ಲದೆ ಊಟವೇ ಸೇರೋದಿಲ್ಲ ಎಂಬಂತವರಂತೂ ಎಷ್ಟು ಮುಂಜಾಗ್ರತಾ ಕ್ರಮ ವಹಿಸಿದರೂ ಕಡಿಮೆಯೆ. ಮೀನಿನ ಮುಳ್ಳು ಗಂಟಲಲ್ಲಿ ಸಿಲುಕಿಕೊಂಡರೆ ಅಪಾಯ ಕಟ್ಟಿಟ್ಟ ಬುತ್ತಿ. ಇದೀಗ ಅಂತಹುದೇ ಒಂದು ಘಟನೆ ಕೇರಳದಲ್ಲಿ ನಡೆದಿದೆ. ಆದರೆ ಯುವಕನ ಗಂಟಲಲ್ಲಿ ಸಿಲುಕಿಕೊಂಡದ್ದು ಮೀನಿನ ಮುಳ್ಳಲ್ಲ ಬದಲಾಗಿ ಮೀನೇ....
ಮೀನುಗಾರಿಕೆ ನಡೆಸುತ್ತಿದ್ದಾಗಲೇ ನಡೆದು ಹೋಯ್ತು ಅಚಾನಕ್ ಘಟನೆ...!!
ಭತ್ತದ ಗದ್ದೆಯಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಯುವಕನೋರ್ವನ ಗಂಟಲಲ್ಲಿ ಮೀನು ಸಿಲುಕಿ ಸಾವನ್ನಪ್ಪಿದ ಅಪರೂಪದ ಘಟನೆ ಕೇರಳದ ಆಲಪ್ಪುಳ ಬಳಿಯ ಕಾಯಂಕುಳಂನಲ್ಲಿ ನಡೆದಿದೆ. ಪುತುಪ್ಪಳ್ಳಿಯ ಆದರ್ಶ್ ಅಲಿಯಾಸ್ ಉನ್ನಿ (೨೫) ಮೃತಪಟ್ಟ ದುರ್ದೈವಿಯಾಗಿದ್ದಾನೆ. ಭಾನುವಾರ ಈ ಘಟನೆ ನಡೆದಿದೆ. ಮೀನುಗಾರಿಕೆ ನಡೆಸುವ ಸಂದರ್ಭ ಇಂತಹ ಘಟನೆ ನಡೆಯೋದು ಅತೀ ವಿರಳ. ಇದೀಗ ಯುವಕನನ್ನು ಕಳೆದುಕೊಂಡ ಮನೆಯವರು, ಇಡೀ ಊರಿಗೆ ಊರೇ ಶೋಕಸಾಗರದಲ್ಲಿ ಮುಳುಗಿದೆ. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ ೧೯೪ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಮೀನುಗಾರಿಕೆ ನಡೆಸುವ ವೇಳೆ ಆಗಿದ್ದೇನು...??
ಭಾನುವಾರ ಸಂಜೆ ನಾಲ್ಕು ಮೂವತ್ತರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದೆ. ತನ್ನ ಗೆಳೆಯರೊಂದಿಗೆ ಆದರ್ಶ್ ಭತ್ತದ ಗದ್ದೆಯನ್ನು ಬರಿದು ಮಾಡಿ ಮೀನುಗಾರಿಕೆ ನಡೆಸುತ್ತಿದ್ದನು. ಈ ವೇಳೆ ಆತ ತನ್ನ ಬಾಯಿಯಲ್ಲಿ ಹಿಡಿದಿದ್ದ ಮೀನು ಜಾರಿ ಗಂಟಲಲ್ಲಿ ಸಿಲುಕಿಕೊಂಡಿದೆ. ತಕ್ಷಣ ಆತನನ್ನು ಓಚಿರಾ ಬಳಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ದುರಾದೃಷ್ಟವಶಾತ್ ಆತನ ಪ್ರಾಣ ಪಕ್ಷಿ ಹಾರಿ ಹೋಗಿತ್ತು.