ವಿಟ್ಲ : ಕಲ್ಲು ಕೋರೆ ನಡೆಸುವಾಗ ನಾವು ಅತ್ಯಂತ ಜಾಗರೂಕರಾಗಿರಬೇಕಾಗುತ್ತದೆ. ಏಕೆಂದರೆ ಸುತ್ತಮುತ್ತಲಿನ ಪ್ರದೇಶದಲ್ಲಿರುವ ಮನೆಗಳಿಗೆ ಏನಾದರೂ ಹಾನಿಯಾದರೆ ಅದಕ್ಕೆ ನಾವೂ ಜವಾಬ್ದಾರರಾಗುತ್ತೇವೆ. ಈ ಮೊದಲು ಇತ್ತೀಚೆಗೆ ಕಲ್ಲು ಕೋರೆಯಿಂದ ಅವಘಡ ಸಂಭವಿಸಿತ್ತು. ಅಕ್ರಮವಾಗಿ ಇದನ್ನು ನಡೆಸಲು ಸರ್ಕಾರದಿಂದ ಅನುಮತಿಯಿಲ್ಲ. ಅಧಿಕೃತವಾದ ಅನುಮತಿಯ ಮೇರೆಗೆ ಕಲ್ಲು ಕೋರೆ ನಡೆಸಬಹುದು. ಇದೀಗ ವಿಟ್ಲದಲ್ಲಿ ಸಂಭವಿಸಿದ ಭೀಕರ ಸದ್ದಿಗೆ ಅಲ್ಲಿಯ ಜನರೇ ದಿಗ್ಭ್ರಾಂತರಾಗಿದ್ದಾರೆ.
ದೈವಸ್ಥಾನಕ್ಕೆ ಸೇರಿದ ಜಾಗದಲ್ಲಿ ಜಿಲೆಟಿನ್ ಸ್ಫೋಟ...!
ವಿಟ್ಲ ಗ್ರಾಮದ ಮಾಡತ್ತಡ್ಕದ ಮಲರಾಯ ಮೂವರ್ ದೈವಂಗಳ್ ದೈವಸ್ಥಾನಕ್ಕೆ ಸೇರಿದ ಜಾಗದಲ್ಲಿ ಭಾರೀ ಪ್ರಮಾಣದ ಕಲ್ಲುಕೋರೆಗೆ ಬಳಸುವ ಸ್ಫೋಟಕವಾದ ಜಿಲೆಟಿನ್ ಸ್ಫೋಟಗೊಂಡಿದೆ. ಸ್ಫೋಟದ ಸದ್ದು ವಿಟ್ಲ ಗ್ರಾಮದ ಸಮೀಪದಲ್ಲಿನ ಹಲವು ಗ್ರಾಮಗಳಲ್ಲಿ ಕೇಳಿಸಿದ್ದು ಜನರು ಆತಂಕಕ್ಕೀಡಾಗಿದ್ದಾರೆ. ಐದು ಗ್ರಾಮದಲ್ಲಿ ಭೂಕಂಪನದ ರೀತಿಯ ಅನುಭವ ಉಂಟಾಗಿದೆ. ಈ ಸದ್ದಿಗೆ ಗ್ರಾಮದ ಜನರು ಬೆಚ್ಚಿ ಬಿದ್ದಿದ್ದಾರೆ.
ದಿಢೀರ್ ಸ್ಫೋಟಗೊಂಡ ಜಿಲೆಟಿನ್ ಕಡ್ಡಿಗಳು, 15 ಮನೆಗಳಿಗೆ ಹಾನಿ..!
ಜಿಲೆಟಿನ್ ಸ್ಫೋಟಗೊಂಡ ಪರಿಣಾಮ ಭೂಮಿ ಒಮ್ಮೆಲೆ ಕಂಪಿಸಿದೆ. ಇದರ ಅದರುವಿಕೆಯಿಂದ ಸುಮಾರು ಅಂದಾಜು ಹದಿನೈದು ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು ಅಲ್ಲಲ್ಲಿ ಹಾನಿಯಾಗಿದೆ. ಕೆಲ ಮನೆಗಳು ತೀವ್ರತರವಾಗಿ ಹಾನಿಗೆ ಒಳಗಾಗಿದೆ. ಮಧ್ಯಾಹ್ನ 1.30 ಕ್ಕೆ ಈ ಸ್ಫೋಟ ಸಂಭವಿಸಿದ್ದು, ಇದಕ್ಕೆ ಇಲ್ಲಿನ ಎನ್ ಎಸ್ ಎಂಬ ಕಪ್ಪು ಕಲ್ಲಿನ ಗಣಿಗಾರಿಕೆಯೇ ಕಾರಣ ಎನ್ನಲಾಗಿದೆ. ಕಲ್ಲಿನ ಕೋರೆಯ ಕಾರ್ಮಿಕರು ಜಿಲೆಟಿನ್ ಕಡ್ಡಿಗಳನ್ನು ದೈವಸ್ಥಾನದ ತೆರೆದ ಸ್ಥಳದಲ್ಲಿ ಬಿಸಿಲಿಗೆ ಒಣಗಲು ಹಾಕಿದ್ದರು.
ಮಧ್ಯಾಹ್ನ ಅವರು ಊಟಕ್ಕೆ ಹೋಗಿದ್ದ ಸಂದರ್ಭ ಈ ಜಿಲೆಟಿನ್ ಕಡ್ಡಿಗಳು ಏಕಾಏಕಿ ಸ್ಪೋಟಗೊಂಡು ಈ ದುರಂತ ಸಂಭವಿಸಿದೆ. ಎನ್ ಎಸ್ ಕೋರೆ ಅಬ್ದುಲ್‌ಗೆ ಎಂಬವರಿಗೆ ಸೇರಿದ್ದಾಗಿದ್ದು, ಘಟನಾ ಸ್ಥಳದಲ್ಲಿ ಸೇರಿದ ಜನರು ಸ್ಫೋಟದ ವಿಚಾರವಾಗಿ ಕಾರ್ಮಿಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿದ್ದು, ಘಟನೆಯ ಬಗ್ಗೆ ಮಾಹಿತಿ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.