ನಾಪತ್ತೆಯಾದ ಫರಂಗಿಪೇಟೆ ದಿಗಂತ್ ಮನೆಗೆ ಭೇಟಿಯಿತ್ತ ಅರುಣ್ ಕುಮಾರ್ ಪುತ್ತಿಲ..! ತನಿಖೆ ಚುರುಕುಗೊಳಿಸಲು ಒತ್ತಾಯ...!

  • 05 Mar 2025 02:58:22 PM

ಫರಂಗಿಪೇಟೆ: ಇತ್ತೀಚಿನ ದಿನಗಳಲ್ಲಿ ನಾಪತ್ತೆ ಪ್ರಕರಣ ದ.ಕ ಜಿಲ್ಲೆಯಲ್ಲಿ ಹೆಚ್ಚಾಗುತ್ತಿದೆ. ಇದಕ್ಕೆ ಯುವಕರೂ ಕೂಡಾ ಹೊರತಾಗಿಲ್ಲ. ದಿಢೀರ್ ನಾಪತ್ತೆಯಾಗಲು ಕಾರಣ ಏನು ಎಂಬುವುದೂ ಗೊತ್ತಾಗೋದಿಲ್ಲ. ಇದೀಗ ಫರಂಗಿಪೇಟೆಯ ನಾಪತ್ತೆ ಪ್ರಕರಣವಂತೂ ದ.ಕ ಜಿಲ್ಲೆಯಲ್ಲೇ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ. 

 

ನಾಪತ್ತೆಯಾದ ದಿಗಂತ್ ಮನೆಗೆ ಅರುಣ್ ಕುಮಾರ್ ಪುತ್ತಿಲ ಭೇಟಿ..!

 

ಕಳೆದ ಒಂದು ವಾರದ ಹಿಂದೆ ಬಂಟ್ವಾಳ ತಾಲ್ಲೂಕಿನ ಫರಂಗಿಪೇಟೆಯ ನಿವಾಸಿ, ಪಿಯುಸಿ ವಿದ್ಯಾರ್ಥಿ ದಿಗಂತ್ ದೇವಸ್ಥಾನಕ್ಕೆ ಎಂದು ಮನೆಯಿಂದ ಹೊರಟು ಬಂದವನು ಹಿಂತಿರುಗದೆ ನಾಪತ್ತೆಯಾಗಿದ್ದಾನೆ. ನಿಗೂಢವಾಗಿ ನಾಪತ್ತೆಯಾದ ಈತನ ಬಗ್ಗೆ ವಾರ ಕಳೆದರೂ ಪೊಲೀಸರಿಗೆ ಸಣ್ಣ ಸಾಕ್ಷ್ಯಾಧಾರಗಳೂ ಸಿಕ್ಕಿಲ್ಲ. ಪ್ರಕರಣ ದಿನೇ ದಿನೇ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ.

 

ಇದೀಗ ಈತನ ಮನೆಗೆ ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಅವರು ಭೇಟಿ ನೀಡಿದ್ದಾರೆ. ಮಗ ನಾಪತ್ತೆಯಾದ ಬಗ್ಗೆ ಅತೀವ ಸಂಕಟ ಪಡುತ್ತಿರುವ ಆತನ ಹೆತ್ತವರ ಜೊತೆ ಪುತ್ತಿಲ ಮಾತನಾಡಿ ಧೈರ್ಯ ತುಂಬಿದ್ದಾರೆ. ಮಗ ಸಿಕ್ಕಿಯೇ ಸಿಗುತ್ತಾನೆ. ಈ ಬಗ್ಗೆ ವಿಪರೀತ ಯೋಚಿಸಬೇಡಿ ಎಂದು ವಿಶ್ವಾಸ ತುಂಬಿದ್ದಾರೆ. 

 

ತನಿಖಾ ತಂಡಕ್ಕೆ ಶೀಘ್ರವಾಗಿ ಪತ್ತೆ ಹಚ್ಚುವಂತೆ ಒತ್ತಾಯ...!

 

ಈ ಪ್ರಕರಣದ ಬಗ್ಗೆ ಪೊಲೀಸರು ಉದಾಸೀನತೆ ತೋರಿದ ಕಾರಣ ಗ್ರಾಮಸ್ಥರು ರಸ್ತೆಗಿಳಿದು ಹೋರಾಟ ನಡೆಸಿದ್ದರು. ಪ್ರತಿಭಟನೆಯಲ್ಲಿ ನಿರ್ಲಕ್ಷ್ಯ ತೋರುತ್ತಿರುವ ಬಗ್ಗೆ ರೊಚ್ಚಿಗೆದ್ದು ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಅರುಣ್ ಕುಮಾರ್ ಪುತ್ತಿಲ ಅವರು ಎಸ್ಪಿ ಜೊತೆ ಹಾಗೂ ತನಿಖಾ ತಂಡದ ಜೊತೆ ಮಾತನಾಡಿ ಶೀಘ್ರವಾಗಿ ಪತ್ತೆ ಹಚ್ಚುವಂತೆ ಒತ್ತಾಯಿಸಿದ್ದಾರೆ.

 

ಅಷ್ಟೇ ಅಲ್ಲದೆ ಗಾಂಜಾ ಅಡ್ಡೆಯಾಗಿರುವ ಫರಂಗಿಪೇಟೆ ಪ್ರದೇಶಗಳಲ್ಲಿ ಶೀಘ್ರವಾಗಿ ಈ ಮಾದಕ ವಸ್ತು ಸೇವನೆ ನಿರ್ಮೂಲನೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ತನಿಖೆ ಪ್ರಗತಿಯಲ್ಲಿದ್ದು ಶೀಘ್ರವಾಗಿ ಪತ್ತೆ ಹಚ್ಚೋದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ.