ಮಂಜೇಶ್ವರ: ಈಗಂತೂ ವಾಹನ ಸವಾರರಿಗೆ ತಾಳ್ಮೆ ಅನ್ನೋದೇ ಇಲ್ಲ. ರಸ್ತೆ ನಿಯಮಗಳನ್ನು ಪಾಲಿಸದೆ, ಅತೀ ವೇಗದಿಂದ ವಾಹನ ಚಲಾಯಿಸಿ ಅಪಘಾತದಂತಹ ದುರಂತಗಳಲ್ಲಿ ಸಾವನ್ನಪ್ಪುತ್ತಿದ್ದಾರೆ. ಇದರಿಂದ ಸಾವಿನ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿದೆ. ಇದೀಗ ಮಂಜೇಶ್ಚರದಲ್ಲೊಂದು ಭೀಕರ ಅಪಘಾತ ಸಂಭವಿಸಿದೆ.
ಕಂಟ್ರೋಲ್ ತಪ್ಪಿ ಸೇತುವೆಯ ಕಂಬಕ್ಕೆ ಢಿಕ್ಕಿ ಹೊಡೆದ ಕಾರು..!!
ಮಂಜೇಶ್ವರದ ರಾಷ್ಟ್ರೀಯ ಹೆದ್ದಾರಿ 77ರ ಹೊಸಂಗಡಿ ಚೆಕ್ ಪೋಸ್ಟ್ ಬಳಿ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಸೇತುವೆಯ ಕಂಬಕ್ಕೆ ಹೋಗಿ ಢಿಕ್ಕಿ ಹೊಡೆದಿದೆ. ಇದರ ಪರಿಣಾಮ ಕಾರಿನಲ್ಲಿದ್ದ ತಂದೆ- ಮಗ ಸಹಿತ ಮೂವರು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ನಡೆದಿದೆ. ಪೈವಳಿಕೆ ಬಾಯಿಕಟ್ಟೆ ನಿವಾಸಿಗಳಾದ ಜನಾರ್ಧನ, ಅವರ ಪುತ್ರ ವರುಣ್ ಮತ್ತು ಕಿಶನ್ ಮೃತ ದುರ್ದೈವಿಗಳು ಎಂದು ಗುರುತಿಸಲಾಗಿದೆ. ಕಾರಿನಲ್ಲಿದ್ದ ಮತ್ತೋರ್ವ ವ್ಯಕ್ತಿ ರತ್ನಂ ಎಂಬವರು ಗಂಭೀರವಾಗಿ ಗಾಯಗೊಂಡಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಡೆದ ಘಟನೆ ಏನು...?
ಸೋಮವಾರದಂದು ಕಿಶನ್ ಮಂಗಳೂರಿಗೆ ತಲುಪಬೇಕಿದ್ದ ಕಾರಣದಿಂದಾಗಿ ಬಾಯಿಕಟ್ಟೆಯಿಂದ ಅವರು ಮಂಗಳೂರಿಗೆ ತೆರಳಿದ್ದರು. ಈ ವೇಳೆ ಕಂಟ್ರೋಲ್ ತಪ್ಪಿ ಕಾರು ರಾಷ್ಟ್ರೀಯ ಹೆದ್ದಾರಿ 22 ಹೊಸಂಗಡಿ ಚೆಕ್ ಪೋಸ್ಟ್ ಬಳಿ ಸೇತುವೆಯ ಕಂಬಕ್ಕೆ ಢಿಕ್ಕಿ ಹೊಡೆದಿದೆ. ಇದರ ಪರಿಣಾಮ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ಅಪಘಾತದ ತೀವ್ರತೆಗೆ ಸ್ಥಳದಲ್ಲೇ ಮೂವರು ದಾರುಣವಾಗಿ ಉಸಿರು ಚೆಲ್ಲಿದ್ದಾರೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.