ಮೂರು ದಿನದ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಯುವಕ...! ಹಾರ್ಟ್ ಅಟ್ಯಾಕ್ ಆಗಿ ದಾರುಣ ಅಂತ್ಯ....!

  • 06 Mar 2025 12:48:40 PM


ಬೆಂಗಳೂರು : ಮನುಷ್ಯನಾಗಿ ಹುಟ್ಟಿದ ಮೇಲೆ ಸಾವು ಖಚಿತವಾದರೂ ಕೂಡಾ ಅಷ್ಟೇ ಅನಿರೀಕ್ಷಿತ. ಯಾವಾಗ ಹೇಗೆ ಬರುತ್ತೆ ಎಂದು ಹೇಳಲೂ ಸಾಧ್ಯವಿಲ್ಲ. ಇವತ್ತು ನಮ್ಮ ಜೊತೆ ಖುಷಿ ಖುಷಿಯಿಂದ ಇದ್ದವರು ನಾಳೆ ಆಗುವಷ್ಟರಲ್ಲಿ ಮೃತಪಟ್ಟಿರುತ್ತಾರೆ. ಸುಳಿವೇ ಇಲ್ಲದೆ ಆಗುವ ಅಗಲಿಕೆಯ ನೋವು ಮಾತ್ರ ಅಷ್ಟಿಷ್ಟಲ್ಲ. ಆದರೆ ದಾಂಪತ್ಯ ಜೀವನ ಶುರು ಮಾಡಿ ಕೇವಲ ಮೂರು ದಿನವಾಗುವಾಗಲೇ ಸಂಗಾತಿ ಇಲ್ಲ ಅಂದ್ರೆ ಹೇಗೆ ಆಗಬೇಡ ಹೇಳಿ...ಅಂತಹುದೇ ಹೃದಯ ವಿದ್ರಾವಕ ಘಟನೆ ಕೆ.ಆರ್ ಪೇಟೆಯಲ್ಲಿ ನಡೆದಿದೆ.

 

ಮದ್ವೆಯಾದ ಮೂರೇ ದಿನಕ್ಕೆ ಸಂಗಾತಿಯನ್ನು ಅಗಲಿದ ಯುವಕ...!

 

ವೈವಾಹಿಕ ಜೀವನಕ್ಕೆ ಕಾಲಿಟ್ಟು ಮೂರು ದಿನ ಆಗುವಷ್ಟರಲ್ಲೇ ಯುವಕ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ ಘಟನೆ ಕೆ.ಆರ್ ಪೇಟೆ ಪಟ್ಟಣದಲ್ಲಿ ನಡೆದಿದೆ. ಪುರಸಭೆ ಸದಸ್ಯ ಕೆ.ಸಿ ಮಂಜುನಾಥ್ ಪುತ್ರ ಶಶಾಂಕ್ (೨೮) ಮೃತ ದುರ್ದೈವಿ. ಈತ ಖಾಸಗಿ ಕಂಪೆನಿಯಲ್ಲಿ ಐಟಿ ಉದ್ಯೋಗಿಯಾಗಿದ್ದನು. ಜಾರ್ಖಾಂಡ್ ಮೂಲದ ಯುವತಿ ಅಷ್ಣಾರನ್ನು ಶಶಾಂಕ್ ಪ್ರೀತಿಸುತ್ತಿದ್ದರು. ನಂತರ ಮನೆಯವರನ್ನು ಒಪ್ಪಿಸಿ ಭಾನುವಾರ ಮೈಸೂರಿನ ರೆಸಾರ್ಟ್ ಒಂದರಲ್ಲಿ ಅದ್ಧೂರಿಯಾಗಿ ಮದುವೆ ನೆರವೇರಿತ್ತು. ಮದುವೆಯ ಸಂಭ್ರಮದಲ್ಲಿರುವಾಗಲೇ ಈ ದುರಂತ ಸಂಭವಿಸಿದ್ದು ಯುವತಿ ಮಾತ್ರ ಆಘಾತಕ್ಕೊಳಗಾಗಿ ಶೋಕ ಸಾಗರದಲ್ಲಿ ಮುಳುಗಿದ್ದಾಳೆ. 

 

ಶಶಾಂಕ್ ಗೆ ನಿಜಕ್ಕೂ ಆಗಿದ್ದೇನು..?

 

ಶಶಾಂಕ್ ಮದುವೆ ದಿನವೂ ಕೂಡಾ ಜ್ವರ ಮತ್ತು ಆಯಾಸದಿಂದ ಬಳಲುತ್ತಿದ್ದರು. ಈ ಬಗ್ಗೆ ತನ್ನ ಗೆಳೆಯನಲ್ಲಿ ಕೂಡಾ ಹೇಳಿಕೊಂಡಿದ್ದರು. ಶಶಾಂಕ್ ಬೆಂಗಳೂರಿನ ಮನೆಯಲ್ಲಿರುವಾಗಲೇ ಮಂಗಳವಾರ ಅವರಿಗೆ ಎದೆನೋವು ಕಾಣಿಸಿಕೊಂಡಿದ್ದು ಪೋಷಕರು ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಆದರೆ ದುರಾದೃಷ್ಟವಶಾತ್ ಶಶಾಂಕ್ ಆಗಲೇ ಕೊನೆಯುಸಿರೆಳೆದಿದ್ದರು.