ಮಂಗಳೂರು|ರಿಕ್ಷಾದಲ್ಲಿ ಅಕ್ರಮ ಗಾಂಜಾ ಸಾಗಾಟ, ಚಾಲಕನನ್ನು ಅರೆಸ್ಟ್ ಮಾಡಿದ ಸಿಸಿಬಿ ಪೊಲೀಸರು...!!

  • 07 Mar 2025 02:22:54 PM

ಮಂಗಳೂರು: ಯುವಜನತೆ ಮಾದಕ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ಇದಕ್ಕೆ ಮೆಡಿಕಲ್ ವಿದ್ಯಾರ್ಥಿಗಳು ಕೂಡಾ ಹೊರತಾಗಿಲ್ಲ. ದ.ಕ ಜಿಲ್ಲೆಯಲ್ಲಂತೂ ಇತ್ತೀಚೆಗೆ ಅಕ್ರಮ ಗಾಂಜಾ ಸಾಗಾಟ ಪ್ರಕರಣಗಳು ಹೆಚ್ಚಾಗುತ್ತಿದೆ. ದಾರಿ ಮಧ್ಯೆ ತಪಾಸಣೆ ನಡೆಸಿ ಈಗಾಗಲೇ ಪೊಲೀಸರು ಅನೇಕರನ್ನು ಬಂಧಿಸಿದ್ದಾರೆ. ಇದೀಗ ಮತ್ತೊಂದು ಇಂತಹುದೇ ಪ್ರಕರಣ ಬಯಲಾಗಿದೆ.

 

ಆಟೋರಿಕ್ಷಾದಲ್ಲಿ ಅಕ್ರಮವಾಗಿ ನಿಷೇಧಿತ ಎಂಡಿಎಂಎ ಸಾಗಾಟ..!

 

ರಿಕ್ಷಾದಲ್ಲಿ ವ್ಯಕ್ತಿಯೋರ್ವ ನಿಷೇಧಿತ ಮಾದಕ ವಸ್ತುವಾದ ಎಂಡಿಎಂಎ ಸಾಗಿಸಿ ಮತ್ತು ಮಾರಾಟ ಕೂಡಾ ಮಾಡುತ್ತಿದ್ದಾಗ ಪೊಲೀಸರು ಪತ್ತೆ ಹಚ್ಚಿ ಆತನನ್ನು ಬಂಧಿಸಿ ಗಾಂಜಾ ವಶಪಡಿಸಿಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ. ಬೆಂಗರೆ ನಿವಾಸಿ ಮೂವತ್ತೆರಡು ವರ್ಷದ ಮುಹಮ್ಮದ್ ಅಬ್ದುಲ್ ಜಲೀಲ್ ಬಂಧಿತ ಆರೋಪಿಯಾಗಿದ್ದಾನೆ. ಈತನಿಂದ ಮೂರು ಲಕ್ಷಕ್ಕೂ ಅಧಿಕ ಮೌಲ್ಯದ 75 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂದರ್ ಠಾಣೆಯಲ್ಲಿ ಈತನ ವಿರುದ್ಧ ಪ್ರಕರಣ ದಾಖಲಾಗಿದೆ.

 

ಬೆಂಗಳೂರಿನಿಂದ ಗಾಂಜಾ ತಂದು ಮಂಗ್ಳೂರಲ್ಲಿ ಹಂಚುತ್ತಿದ್ದ ಖದೀಮ..!

 

ಈ ನಿಷೇಧಿತ ಮಾದಕ ವಸ್ತುವಾದ ಎಂಡಿಎಂಎಯನ್ನು ಪಾರ್ಸೆಲ್ ಮೂಲಕ ಬೆಂಗಳೂರಿನಿಂದ ಮಂಗಳೂರಿಗೆ ತಂದು ಆಟೋರಿಕ್ಷಾದಲ್ಲಿ ಅಕ್ರಮವಾಗಿ ಕಾಲೇಜು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಈತ ಮಾರಾಟ ಮಾಡುತ್ತಿದ್ದ. ಖಚಿತ ಮಾಹಿತಿ ಪಡೆದ ಸಿಸಿಬಿ ಪೊಲೀಸರು ದಾಳಿ ನಡೆಸಿದಾಗ ಈತ ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಾನೆ. ಈತನಿಂದ ಮಾದಕ ವಸ್ತು ಸಹಿತ ಮೊಬೈಲ್ ಮತ್ತು ರಿಕ್ಷಾವನ್ನು ಕೂಡಾ ಪೊಲೀಸರು ಸ್ವಾಧೀನಪಡಿಸಿಕೊಂಡಿದ್ದಾರೆ. ಒಟ್ಟು ಸೊತ್ತಿನ ಮೌಲ್ಯ ಐದು ಲಕ್ಷ ಎಂದು ಅಂದಾಜಿಸಬಹುದು.