ಕಾಂತಾರ-2 ಶೂಟಿಂಗ್ ಮುಗಿಸಿ ಕರಾವಳಿಯಲ್ಲಿ ಟೆಂಪಲ್ ರನ್ ಮಾಡಿದ ರಿಷಬ್ ಶೆಟ್ಟಿ ಕುಟುಂಬ..! ಕುತ್ತಾರು, ಕದ್ರಿ ಕ್ಷೇತ್ರಕ್ಕೆ ಭೇಟಿ

  • 07 Mar 2025 02:39:07 PM

ನಟ ರಿಷಬ್ ಶೆಟ್ಟಿ ಅವರು ನಿರ್ದೇಶಿಸಿ ನಟಿಸಿದ್ದ ಕಾಂತಾರ ಚಿತ್ರ ಕನ್ನಡ ಚಿತ್ರರಂಗದಲ್ಲೇ ಹೊಸ ಸಂಚಲನವನ್ನು ಸೃಷ್ಟಿಸಿತ್ತು. ಇದೀಗ ಅಭಿಮಾನಿಗಳು ಕಾತರದಿಂದ ಕಾಯುತ್ತಿರುವ ಕಾಂತಾರ ಚಾಪ್ಟರ್-2 ಚಿತ್ರದ ಚಿತ್ರೀಕರಣ ಮುಗಿಸಿ ರಿಷಬ್ ಶೆಟ್ಟಿ ಅವರು ಕರಾವಳಿಯಲ್ಲಿ ಟೆಂಪಲ್ ರನ್ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ.

 

ಕಟೀಲು, ಕದ್ರಿ, ಕುತ್ತಾರು ಕ್ಷೇತ್ರದಲ್ಲಿ ಪೂಜೆ ಸಲ್ಲಿಸಿ ಪುನೀತರಾದ ಡಿವೈನ್ ಸ್ಟಾರ್...!

 

ನಟ ರಿಷಬ್ ಶೆಟ್ಟಿ ಅವರು ಕರಾವಳಿಯಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿನಿತ್ಯ ಭೇಟಿ ನೀಡುವಂತಹ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇಗುಲಕ್ಕೆ ಕುಟುಂಬ ಸಮೇತರಾಗಿ ಭೇಟಿ ನೀಡಿ ದೇವಿಯ ದರ್ಶನ ಪಡೆದರು. ನಂತರ ವಿಶೇಷವಾದ ಪೂಜೆ ಸಲ್ಲಿಸಿ ಕೃತಾರ್ಥರಾದರು. ಈ ಸಂದರ್ಭ ಪತ್ನಿ ಮತ್ತು ಮಗನೊಂದಿಗೆ ಸನ್ನಿಧಾನಕ್ಕೆ ಭೇಟಿ ನೀಡಿದ್ದ ರಿಷಬ್ ಶೆಟ್ಟಿಯನ್ನು ದೇಗುಲದ ವತಿಯಿಂದ ಪ್ರಸಾದ, ಶ್ವೇತ ವಸ್ತ್ರ ನೀಡಿ ಗೌರವಿಸಲಾಯಿತು. ಅಷ್ಟೇ ಅಲ್ಲದೆ ಕದ್ರಿ ಮಂಜುನಾಥ ದೇಗುಲಕ್ಕೆ ಆಗಮಿಸಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದರು. ನಂತರ ತುಳುವರ ನಂಬಿಕೆ ಮತ್ತು ಕಾರಣಿಕ ಕ್ಷೇತ್ರವಾದ ಕುತ್ತಾರು ಕೊರಗಜ್ಜನ ಕಟ್ಟೆಗೆ ಭೇಟಿ ನೀಡಿ ಅಲ್ಲಿ ಅಜ್ಜನಿಗೆ ಎಲೆ ಅಡಿಕೆ, ಚಕ್ಕುಲಿ ಮತ್ತು ಮದ್ಯವನ್ನು ಸಮರ್ಪಿಸಿದರು. 

 

ನಟ ರಿಷಬ್ ಮಾಧ್ಯಮಕ್ಕೆ ಏನಂದ್ರು...?

 

ದೇವರ ದರ್ಶನದ ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ನಟ ರಿಷಬ್ ಶೆಟ್ಟಿ ಅವರು ಶೂಟಿಂಗ್ ಕೊನೆಯ ಹಂತದಲ್ಲಿದೆ. ಈಗ ಕುಟುಂಬ ಸಮೇತರಾಗಿ ಟೆಂಪಲ್ ರನ್ ಮಾಡುತ್ತಿದ್ದೇವೆ. ಅ.೨ಕ್ಕೆ ಚಿತ್ರ ರಿಲೀಸ್ ಆಗೋದಾಗಿ ಮೀಟಿಂಗ್ ಆಗ್ತಿದೆ. ನೋಡ್ಬೇಕು ಎಂದು ಹೇಳಿದರು. ಇನ್ನು ಡಿಸಿಎಂ ಡಿಕೆಶಿ ಅವರ ವಾರ್ನಿಂಗ್ ವಿಚಾರವಾಗಿ ಪ್ರತಿಕ್ರಿಯಿಸಿ ನಾನು ಶೂಟಿಂಗ್ ನಲ್ಲಿದ್ದೆ. ಈ ಬಗ್ಗೆ ನನಗೆ ಗೊತ್ತಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.