ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ 16ನೇ ಬಜೆಟ್ ಸಂಪೂರ್ಣವಾಗಿ ಸಮತೋಲನ ಕಳೆದುಕೊಂಡಿದೆ ಎಂದೂ ಇದು ಕೇವಲ ಒಂದು ಸಮುದಾಯದ ಓಲೈಕೆಗಾಗಿಯೇ ಬಂಡವಾಳ ಹೂಡಿರುವುದರಿಂದ ತುಷ್ಟೀಕರಣ ರಾಜಕಾರಣದ ಪರಾಕಾಷ್ಠೆ ಎಂಬಂತೆ ಪರಿಣಮಿಸಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಟೀಕಿಸಿದರು.
ನಿರುದ್ಯೋಗಿ ಭತ್ಯೆ, ಗೃಹಲಕ್ಷ್ಮಿ ಯೋಜನೆಯಂತಿರುವ ಗ್ಯಾರಂಟಿಗಳಿಗೆ ಹಣ ಬಿಡುಗಡೆ ಮಾಡಲು ಪರದಾಡುವ ಸರ್ಕಾರವು 4 ಲಕ್ಷ ಕೋಟಿ ರೂ.ಗಳ ಬಜೆಟ್ ಅನ್ನು ಮಂಡಿಸಿ 1.16 ಲಕ್ಷ ಕೋಟಿ ರೂ. ಸಾಲದ ಹೊರೆಯನ್ನು ಜನರ ಮೇಲೆ ಹಾಕಿದ್ದು ಆರ್ಥಿಕ ಶಿಸ್ತಿನ ಅಭಾವವನ್ನು ತೋರಿಸುತ್ತದೆ ಎಂದು ಅವರು ಹೇಳಿದರು.
ಅದು ಅಷ್ಟೇ ಅಲ್ಲದೆ, ವಕ್ಫ್ ಆಸ್ತಿಗಳ ರಕ್ಷಣೆಗೆ 150 ಕೋಟಿ ರೂ., ಹಜ್ ಭವನದಲ್ಲಿ ಮುಕ್ತ ವಿವಿ ಕೇಂದ್ರ ಸ್ಥಾಪನೆ, 100 ಉರ್ದು ಶಾಲೆಗಳ ಉನ್ನತೀಕರಣಕ್ಕೆ 100 ಕೋಟಿ ರೂ., ಅಲ್ಪಸಂಖ್ಯಾತರ ಕಾಲೋನಿ ಅಭಿವೃದ್ಧಿಗೆ 1,000 ಕೋಟಿ ರೂ. ಅನುದಾನ ಸೇರಿದಂತೆ ಹಲವು ಯೋಜನೆಗಳ ಘೋಷಣೆ ಮಾಡಿದ ಸರ್ಕಾರ, ಹಿಂದುಳಿದ ವರ್ಗಗಳ ಬೇಡಿಕೆಗಳನ್ನು ಸಂಪೂರ್ಣ ಕಡೆಗಣಿಸಿರುವುದು ವಿಷಾದನೀಯ.
ಕರ್ನಾಟಕದ ಆರ್ಥಿಕ ಸಮತೋಲನ ನಾಶವಾಗುವಂತೆ ಈ ಬಜೆಟ್ ರೂಪಗೊಂಡಿದ್ದು, ಅಲ್ಪ ಸಂಖ್ಯಾತರಿಗೆ ಮಾತ್ರ ವಿಶೇಷ ಸೌಲಭ್ಯ ನೀಡುವ ಮೂಲಕ ರಾಜ್ಯ ಸರ್ಕಾರ ಮತಬ್ಯಾಂಕ್ ರಾಜಕಾರಣದ ಹಾದಿ ಹಿಡಿದಿದೆ ಎಂದು ಅವರು ಆರೋಪಿಸಿದರು.
ಕರಾವಳಿಗೆ ಸಂಬಂಧಿಸಿದ ಪ್ರಮುಖ ಯೋಜನೆಗಳಾದ ಹೈಕೋರ್ಟ್ ಪೀಠ ಸ್ಥಾಪನೆ, ಮಂಗಳೂರು ಏರ್‌ಪೋರ್ಟ್ ರನ್‌ವೇ ವಿಸ್ತರಣೆ, ನಾರಾಯಣ ಗುರು ಅಭಿವೃದ್ಧಿ ನಿಗಮ ಹಾಗೂ ಬಂಟ್ಸ್ ನಿಗಮಕ್ಕೆ ಈ ಬಜೆಟ್‌ನಲ್ಲಿ ಯಾವುದೇ ಅನುದಾನ ಘೋಷಣೆ ಮಾಡದೆ ಇರುವುದು ಕರಾವಳಿಯ ಜನತೆಯನ್ನು ನಿರಾಶೆಗೊಳಿಸಿದೆ.
ಕೇಂದ್ರ ಸರ್ಕಾರದ ಸಹಾಯದಿಂದ ಮುನ್ನಡೆಸಬಹುದಾದ ಯೋಜನೆಗಳನ್ನು ರಾಜ್ಯ ಸರ್ಕಾರ ಕಡೆಗಣಿಸಿದ್ದು ಜನರ ಅಭಿವೃದ್ಧಿಯ ಕಡೆಗಿನ ನಿರ್ಲಕ್ಷ್ಯಭಾವ ತೋರುತ್ತದೆ. ಹಳೇ ಪ್ರಸ್ತಾಪಗಳನ್ನು ಪುನಾರಾವೃತ್ತಿ ಮಾಡುವುದರ ಮೂಲಕ ಉದ್ದೇಶಪೂರ್ವಕವಾಗಿ ಕರಾವಳಿಯ ಅಭಿವೃದ್ಧಿಯನ್ನು ತೊಡೆದುಹಾಕಲಾಗಿದೆ ಎಂದು ಅವರು ಕಿಡಿಕಾರಿದರು.
ರಾಜ್ಯದ ಆರ್ಥಿಕ ಸ್ಥಿತಿ ಚೇತರಿಸಿಕೊಳ್ಳಲು ಬಜೆಟ್‌ನಲ್ಲಿ ಹೊಸ ಆದಾಯ ಸಂಪಾದನೆಯ ಮಾರ್ಗಗಳನ್ನು ನಿರ್ಧರಿಸಬೇಕಾಗಿತ್ತು ಅದರ ಬದಲಿಗೆ ತುಷ್ಟೀಕರಣವನ್ನು ಪ್ರಮುಖ ಗುರಿಯಾಗಿರಿಸಿ ಸಿದ್ದರಾಮಯ್ಯ ಬಜೆಟ್ ರೂಪಿಸಿದ್ದು ಬೇಸರಕ್ಕೆ ಕಾರಣವಾಗಿದೆ ಎಂದು ಹೇಳಿದರು.
ಮೂಲಸೌಕರ್ಯ, ಕೃಷಿ, ಗ್ರಾಮೀಣಾಭಿವೃದ್ಧಿ, ನೀರಾವರಿ ವಲಯಗಳಿಗೆ ಯಾವುದೇ ಹೊಸ ಯೋಜನೆ ಘೋಷಿಸದೇ, ಜಾತಿ-ಮತ ರಾಜಕಾರಣದ ಕಮಣಿಗೆ ಬಜೆಟ್ ಬಳಸಿಕೊಳ್ಳಲಾಗಿರುವುದು ಕರ್ನಾಟಕದ ಭವಿಷ್ಯಕ್ಕೆ ದೊಡ್ಡ ಆತಂಕ ಸೃಷ್ಟಿಸಲಿದೆ ಎಂದು ಎಚ್ಚರಿಸಿದ್ದಾರೆ.