ದಿಗಂತ್ ನಾಪತ್ತೆ ಪ್ರಕರಣ- ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ ಹೆತ್ತವರು...! ಮಾ.12ರೊಳಗೆ ರಿಪೋರ್ಟ್ ನೀಡುವಂತೆ ಪೊಲೀಸರಿಗೆ ಖಡಕ್ ಆದೇಶ...!

  • 08 Mar 2025 01:16:26 PM

ಫರಂಗಿಪೇಟೆ: ಬಂಟ್ವಾಳ ತಾಲ್ಲೂಕಿನ ಫರಂಗಿಪೇಟೆಯಲ್ಲಿ ದಿಗಂತ್ ಎಂಬ ಬಾಲಕ ನಾಪತ್ತೆಯಾಗಿ ಹತ್ತು ದಿನ ಕಳೆದರೂ ಪೊಲೀಸರಿಗೆ ಯಾವುದೇ ರೀತಿಯ ಸುಳಿವು ಪತ್ತೆಯಾಗಿಲ್ಲ. ಪ್ರತೀ ದಿನ ಕಣ್ಣೀರು ಹಾಕುತ್ತಾ ಹೆತ್ತವರು ಆತನ ದಾರಿ ಕಾಯುತ್ತಿದ್ದಾರೆ. ಪೊಲೀಸರ ತನಿಖೆಗೆ ಒಕ್ಕೊರಲಿನಿಂದ ಊರ ಗ್ರಾಮಸ್ಥರು ಪ್ರತಿಭಟನೆ ನಡೆಸಿದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಆದ್ದರಿಂದ ಇದೀಗ ಆತನ ಪೋಷಕರು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ದಿಟ್ಟತನದ ಹೆಜ್ಜೆ ಇಟ್ಟಿದ್ದಾರೆ.

 

ಹೈಕೋರ್ಟ್ ಗೆ ಹೇಬಿಯಸ್ ಕಾರ್ಪಸ್ ಅರ್ಜಿ ಹಾಕಿದ ದಿಗಂತ್ ಪೋಷಕರು...!

 

ಮಗನ ಸುಳಿವು ಸಿಗದ ಕಾರಣದಿಂದಾಗಿ ಆತನ ಪೋಷಕರು ಹೈಕೋರ್ಟ್ ಮೊರೆ ಹೋಗಿದ್ದಾರೆ. ಮಗನನ್ನು ಪತ್ತೆ ಮಾಡಿಕೊಡಲು ಪೊಲೀಸರಿಗೆ ನಿರ್ದೇಶಿಸುವಂತೆ ಕೋರಿ ದಿಗಂತ್ ನ ತಂದೆ ಪದ್ಮನಾಭ್ ಹೇಬಿಯಸ್ ಕಾರ್ಪಸ್ ಅರ್ಜಿ ಸಲ್ಲಿಸಿದ್ದಾರೆ. ಮಾರ್ಚ್ ಹನ್ನೆರಡರ ಒಳಗೆ ತನಿಖಾ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಪೊಲೀಸರಿಗೆ ಆದೇಶ ನೀಡಲಾಗಿದ್ದು ಮಾರ್ಚ್ ಹದಿಮೂರಕ್ಕೆ ವಿಚಾರಣೆ ಮುಂದೂಡಲಾಗಿದೆ. 

 

ಸಾಕಷ್ಟು ಅನುಮಾನಕ್ಕೆ ಕಾರಣವಾದ ದಿಗಂತ್ ನಾಪತ್ತೆ ಪ್ರಕರಣ...!

 

ದೇವಸ್ಥಾನಕ್ಕೆ ಎಂದು ಹೋಗಿದ್ದ ಬಾಲಕ ದಿಗಂತ್ ದೇಗುಲಕ್ಕೂ ಹೋಗದೆ ಮನೆಗೂ ಬಾರದೆ ನಾಪತ್ತೆಯಾಗಿದ್ದಾನೆ. ಆತನ ಮೊಬೈಲ್ ಮತ್ತು ರಕ್ತವಿದ್ದ ಚಪ್ಪಲ್ ಸಿಕ್ಕಿದ್ದು ಪೊಲೀಸರು ಈ ಪ್ರಕರಣದ ತನಿಖೆಯಲ್ಲಿ ಉದಾಸೀನತೆ ತೋರುತ್ತಿದ್ದಾರೆ ಎಂದು ಆರೋಪಿಸಿ ಗ್ರಾಮಸ್ಥರು ಫರಂಗಿಪೇಟೆ ಬಂದ್ ಮಾಡಿಸಿ ಪ್ರತಿಭಟನೆ ಮಾಡಿದ್ದರು.

 

ನಂತರ ಶಾಸಕರ, ರಾಜಕೀಯ ಮುಖಂಡರ ಒತ್ತಡದ ಮೇರೆಗೆ ತನಿಖೆಗೆ ಏಳು ತಂಡ ರಚಿಸಿರುವುದಾಗಿ ಬೊಗಳೆ ಬಿಟ್ಟಿದ್ದರು. ಇದೀಗ ಯಾವುದೇ ಸುಳಿವು ಸಿಗದ ಕಾರಣ ಆತನ ಹೆತ್ತವರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ. ಇನ್ನು ಈತನನ್ನು ಮಂಗಳಮುಖಿಯರು ಅಪಹರಿಸಿಕೊಂಡು ಹೋಗಿರಬಹುದು ಎಂದು ಕೂಡಾ ವದಂತಿ ಹಬ್ಬಿತ್ತು. ಆದರೆ ಮುಂದೆ ತನಿಖೆಯಲ್ಲೇ ಸತ್ಯಾಸತ್ಯತೆ ತಿಳಿದುಬರಬೇಕಿದೆ.